ಪುತ್ತೂರು: ‘ತೆರೆಯ ಮರೆಯಲ್ಲಿರುವ ವ್ಯಕ್ತಿಯ`ರಿಮೋಟ್ ಕಂಟ್ರೋಲ್' ವ್ಯವಸ್ಥೆಯಿಂದಾಗಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯು ಸರ್ವನಾಶವಾಗುವ ಸ್ಥಿತಿ ಎದುರಾಗಿದೆ’ ಎಂದು ಬಾಲಕೃಷ್ಣ ಬೋರ್ಕರ್ ಕೋಡಿಂಬಾಡಿ ಅವರು ಆರೋಪಿಸಿದರು.
‘ಸಂಘ ಪರಿವಾರದಲ್ಲಿ ಯಾವುದೇ ಜವಾಬ್ದಾರಿ ಇಲ್ಲದ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದೇ ಆಗಬೇಕು. ಅವರು ಸೂಚಿಸಿದವರಿಗೇ ಅವಕಾಶ ನೀಡುವುದು ಎಂಬ ‘ಗುಲಾಮ' ವ್ಯವಸ್ಥೆಯಿಂದಾಗಿ ಸಮರ್ಥ ನಾಯಕರ ಆಯ್ಕೆಗೆ ಅವಕಾಶ ಇಲ್ಲದಂತಾಗಿದೆ’ ಎಂದು ಅವರು ದೂರಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಯಾವ ಸಹಕಾರಿ ಸಂಘಕ್ಕೆ ಯಾರು ಅಧ್ಯಕ್ಷನಾಗಬೇಕು. ಎಂಎಲ್ಎ ಅಭ್ಯರ್ಥಿ ಯಾರಾಗಬೇಕು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಯಾರಾಗಬೇಕು ಎಂದು ಪ್ರಭಾಕರ ಭಟ್ ಅವರೇ ಆದೇಶಿಸುತ್ತಾರೆ. ಪುತ್ತೂರು ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಯೋಗ್ಯರು ಅನೇಕರಿದ್ದರೂ ಪರವೂರಿನ ದುರ್ಬಲ ಅಭ್ಯರ್ಥಿಯನ್ನು, ಜಾತಿ ಲೆಕ್ಕಾಚಾರದಲ್ಲಿ ಎಳೆತಂದು ನಿಲ್ಲಿಸಲಾಗಿದೆ. ಸಮರ್ಥ ಅಭ್ಯರ್ಥಿಯನ್ನು ಆರಿಸಲು ಬಿಜೆಪಿಯ ಪುತ್ತೂರು ಘಟಕಕ್ಕೆ ಸಾಧ್ಯವಾಗದಿರುವುದು ದೌರ್ಭಾಗ್ಯ. ಈಗಿನ ಅಭ್ಯರ್ಥಿ ಪ್ರಭಾಕರ ಭಟ್ ಅವರ ರಬ್ಬರ್ ಸ್ಟ್ಯಾಂಪ್’ ಎಂದು ಆರೋಪಿಸಿದರು.
‘ಪಕ್ಷಕ್ಕೆ ಹಿನ್ನಡೆ ಆಗದಿರಲಿ ಎಂದು ಕಾರ್ಯಕರ್ತರೆಲ್ಲರೂ ಇಷ್ಟು ಸಮಯ ಸಹಿಸಿದರು. ಅವರ ಅಭಿಪ್ರಾಯ ಮತ್ತು ಭಾವನೆಗಳನ್ನು ಕಡೆಗಣಿಸಿದ್ದರಿಂದ ಅವರೀಗ ತಿರುಗಿ ಬಿದ್ದಿದ್ದಾರೆ. ನೊಂದ ಕಾರ್ಯಕರ್ತರ ಧ್ವನಿಯಾಗಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರವಾಗಿ ಸ್ಪರ್ಧಿಸುವಂತಾಗಿದೆ. ಬಿಜೆಪಿಯನ್ನು ಮತ್ತೆ ಜನರ ನಿಷ್ಠೆಯ ಪಕ್ಷವಾಗಿಸಲು ಪುತ್ತಿಲ ಗೆಲ್ಲಬೇಕಾಗಿದೆ. ಕ್ಷೇತ್ರಕ್ಕೆ ಸಮರ್ಥ ಶಾಸಕರ ಅಗತ್ಯವಿದೆ’ ಎಂದರು.
‘ಕೆಲಸ ಮಾಡುವ ತುಡಿತ ಇರುವರಿಗೆ ಬಿಜೆಪಿಯಲ್ಲಿ ಅವಕಾಶಗಳಿಲ್ಲ. ರಾಮಭಟ್ ಜತೆ ಸೇರಿ ಪಕ್ಷ ಕಟ್ಟಿದ ನನ್ನನ್ನು ಪಕ್ಷದಿಂದ ಹೊರಹಾಕಲು ಷಡ್ಯಂತ್ರ ನಡೆದಿತ್ತು. ಪಕ್ಷಕ್ಕಾಗಿ ದುಡಿದವರನ್ನು ತುಳಿಯಲಾಯಿತು’ ಎಂದರು.
‘ಬ್ಯಾಂಕ್ ಸಾಲಗಳನ್ನು ತೀರಿಸಲಾಗದ ಸ್ಥಿತಿಯಲ್ಲಿದ್ದ ಡಿ.ವಿ.ಸದಾನಂದ ಗೌಡ ಅವರನ್ನು ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದೆವು. ಅವರೂ ನಿಷ್ಠಾವಂತ ಕಾರ್ಯಕರ್ತರನ್ನು ತುಳಿದರು. ಪಕ್ಷವನ್ನು ಬಲಿಪಶು ಮಾಡಿ ತಾವು ಮಾತ್ರ ಉದ್ಧಾರವಾದರು. ರೈತರ ಕುಮ್ಕಿ ಸಮಸ್ಯೆಗೆ ಪರಿಹಾರ ದೊರಕಿಸಲು ಸಾಧ್ಯವಿದ್ದರೂ ಅದಕ್ಕೆ ಮನಸ್ಸು ಮಾಡಲಿಲ್ಲ. ಸಚಿವ ಡಾ.ವಿ.ಎಸ್.ಆಚಾರ್ಯ ಅವರು ರೂಪಿಸಿದ್ದ ಕುಮ್ಕಿ ಹಕ್ಕು ಕಾನೂನು ಜಾರಿಗೊಳಿಸಲು ಬಿಜೆಪಿಗೆ ಇದುವರೆಗೂ ಸಾಧ್ಯವಾಗಿಲ್ಲ‘ ಎಂದರು .
‘ಡಿ.ವಿ.ಸದಾನಂದ ಗೌಡ ಜನತಾದಳ ಸೇರುವವರಿದ್ದರು. ಆಗ ನಾನೇ ಅವರನ್ನು ರಾಮಭಟ್ ಮನೆಗೆ ಕರೆದೊಯ್ದು ಪಕ್ಷ ತೊರೆಯದಂತೆ ಮನವೊಲಿಸಿದ್ದೆ. ಶಾಸಕ ಸಂಜೀವ ಮಠಂದೂರು ಜನತಾದಳದಲ್ಲಿ ಇದ್ದವರು. 12 ಸಲ ಅವರ ಮನೆಗೆ ಹೋಗಿದ್ದೆ. ನಂತರವೇ ಅವರು ಬಿಜೆಪಿಗೆ ಬಂದಿದ್ದು’ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ಸೊರಕೆ, ನಿವೃತ್ತ ಪ್ರಾಂಶುಪಾಲ ಉದಯಶಂಕರ ಎಚ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.