ADVERTISEMENT

ಬಜಪೆ | ಬಾವಿಗೆ ಬಿದ್ದ ಕರಿ ಚಿರತೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:27 IST
Last Updated 31 ಮಾರ್ಚ್ 2024, 15:27 IST
ಬೋನಿಗೆ ಬಿದ್ದ ಕರಿಚಿರತೆ
ಬೋನಿಗೆ ಬಿದ್ದ ಕರಿಚಿರತೆ   

ಬಜಪೆ: ಅಪರೂಪದ ಕರಿ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಮಂಗಳೂರು ತಾಲ್ಲೂಕಿನ ಎಡಪದವಿನ ಗೊಸ್ಪೆಲ್ ಸನಿಲ ಎಂಬಲ್ಲಿ ಭಾನುವಾರ ನಡೆದಿದೆ.

ಶಕುಂತಳಾ ಆಚಾರ್ಯ ಅವರ ಮನೆಯ ಬಾವಿಗೆ ಕರಿಚಿರತೆ ಬಿದ್ದಿದ್ದು, ಬಾವಿಯಿಂದ ನೀರು ಸೇದಲೆಂದು ಹೋದಾಗ ಬಾವಿಯಲ್ಲಿ ಚಿರತೆ ಇರುವುದು ಗೊತ್ತಾಗಿದೆ. ಚಿರತೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಬೆಳಗ್ಗಿನಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಾಹ್ನದ ವೇಳೆಗೆ ಚಿರತೆಯನ್ನು ಸೆರೆ ಹಿಡಿದರು. ಕಾರ್ಯಾಚರಣೆಗಾಗಿ ಬಾವಿಯ ಸುತ್ತ ಬಲೆ ಹಾಕಿ ಬಾವಿಗೆ ಏಣಿ ಇಳಿಸಲಾಗಿತ್ತು. ಬಾವಿಯ ದಂಡೆಯ ಸಮೀಪ ಚಿರತೆ ಸೆರೆಗೆ ಬೋನು ಇಡಲಾಗಿತ್ತು.

ಎಡಪದವು ಪರಿಸರದ ಬೋರುಗುಡ್ಡೆ ಎಂಬಲ್ಲಿ ಕೆಲವು ದಿನಗಳಿಂದ ಚಿರತೆಯ ಉಪಟಳ ಹೆಚ್ಚಾಗಿತ್ತು. ಹಲವು ಮನೆಗಳ ಸಾಕು ನಾಯಿಗಳು ಹಾಗೂ ದನಗಳು ಚಿರತೆಗೆ ಆಹಾರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಾವಿಗೆ ಬಿದ್ದ ಚಿರತೆಯನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.

ADVERTISEMENT

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಸಹಾಯಕ ವಲಯ ಅರಣ್ಯಾಧಿಕಾರಿ ಜಗರಾಜ್, ಅರಣ್ಯ ಪಾಲಕರಾದ ದಿನೇಶ್, ಕ್ಯಾತಲಿಂಗ, ಚಾಲಕ ಸೂರಜ್, ಸ್ಥಳೀಯರಾದ ಹರೀಶ್, ಗಣೇಶ್, ಬಜಪೆ ಪೊಲೀಸರು ಸಹಕರಿಸಿದ್ದರು.

ಕಾರ್ಯಾಚರಣೆ ವೀಕ್ಷಿಸಲು ಸೇರಿದ್ದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.