ADVERTISEMENT

ಮಾರುಕಟ್ಟೆ ನೋಟ: ಕಾಳುಮೆಣಸು– ಬೆಳೆಗಾರರ ಭರವಸೆ ‘ಕಪ್ಪು ಬಂಗಾರ’

ಆಗಸ್ಟ್‌ನಲ್ಲಿ ಗರಿಷ್ಠ ಬೆಲೆ, ಎರಡು ತಿಂಗಳುಗಳಿಂದ ದರ ಸ್ಥಿರ

ಸಂಧ್ಯಾ ಹೆಗಡೆ
Published 10 ಫೆಬ್ರುವರಿ 2024, 5:37 IST
Last Updated 10 ಫೆಬ್ರುವರಿ 2024, 5:37 IST
ಆಲಂಕಾರಿಕ ಗಿಡದಂತೆ ಮನೆಯಂಗಳದಲ್ಲಿ ಬೆಳೆದಿರುವ ಕಾಳುಮೆಣಸು
ಆಲಂಕಾರಿಕ ಗಿಡದಂತೆ ಮನೆಯಂಗಳದಲ್ಲಿ ಬೆಳೆದಿರುವ ಕಾಳುಮೆಣಸು   

ಮಂಗಳೂರು: ಅಡಿಕೆ ತೋಟದ ಅಂತರ ಬೆಳೆಯಾಗಿರುವ ಕಾಳುಮೆಣಸು ದರ ಏರಿಳಿತಗಳ ನಡುವೆಯೂ ಬೆಳೆಗಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ಪ್ರಮುಖ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು ರೋಗ ಬಾಧೆಯಿಂದ ಇಳುವರಿ ಕುಸಿತ ಕಂಡಾಗ ಬೆಳೆಗಾರನ ಕೈಹಿಡಿಯುವುದು ಜಿಲ್ಲೆಯ ಪ್ರಮುಖ ಸಂಬಾರ ಬೆಳೆಯಾಗಿರುವ ಕಾಳುಮೆಣಸು. ‘ಕಪ್ಪು ಬಂಗಾರ’ದ ಮೇಲೆ ರೈತರು ಇಟ್ಟಿರುವ ಭರವಸೆಯಿಂದಾಗಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಾಳುಮೆಣಸು ಪ್ರದೇಶ ವಿಸ್ತರಣೆ ಆಗುತ್ತಲೇ ಇದೆ.

ಬಹುಕಾಲದ ಸಂಗ್ರಹಿಸಿಟ್ಟರೂ ಕೆಡದ ಈ ಬೆಳೆ ರೈತರಿಗೆ ಆಪತ್‌ಕಾಲದ ನಿಧಿಯಂತೆ. ಉತ್ತಮ ದರ ಬಂದಾಗ ರೈತರು ಕಾಳುಮೆಣಸು ಮಾರಾಟ ಮಾಡುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕಾಳುಮೆಣಸು ಕೆ.ಜಿ.ಯೊಂದಕ್ಕೆ ಕನಿಷ್ಠ ₹370ರಿಂದ ಗರಿಷ್ಠ ₹555 ರವರೆಗೆ ದರ ಇದೆ.

ADVERTISEMENT

ಕಳೆದ ಜೂನ್‌ ತಿಂಗಳ ಕೊನೆಯಲ್ಲಿ ಕಾಳುಮೆಳಸು ಕೆ.ಜಿ.ಯೊಂದಕ್ಕೆ ಗರಿಷ್ಠ ₹465 ದರ ಇದ್ದರೆ, ಜುಲೈನಲ್ಲಿ ಗರಿಷ್ಠ ₹ 545, ಆಗಸ್ಟ್‌ನಲ್ಲಿ ಕನಿಷ್ಠ ₹370ರಿಂದ ಗರಿಷ್ಠ ₹ 615, ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಕನಿಷ್ಠ ₹370ರಿಂದ ಗರಿಷ್ಠ ₹585, ನವೆಂಬರ್, ಡಿಸೆಂಬರ್‌ನಲ್ಲಿ ಕನಿಷ್ಠ ₹450ರಿಂದ ಗರಿಷ್ಠ ₹570 ದರ ದೊರೆತಿದೆ. ದರದಲ್ಲಿ ಕೊಂಚ ಏರಿಳಿತವಾದರೂ, ಉಪ ಬೆಳೆಯಾಗಿರುವ ಕಾರಣ ದೊಡ್ಡ ನಷ್ಟವಾಗುವುದಿಲ್ಲ ಎನ್ನುತ್ತಾರೆ ರೈತರು.

‘ಸಣ್ಣ ಹಿಡುವಳಿದಾರರು ತೋಟ ನಿರ್ವಹಣೆ, ಕಾಳುಮೆಣಸು ಕೊಯ್ಲು ಸ್ವತಃ ನಿರ್ವಹಿಸಿದರೆ, ರೈತರಿಗೆ ಲಾಭದಾಯಕ. ಕೃಷಿ ಕಾರ್ಮಿಕರನ್ನು ಅವಲಂಬಿಸಿದರೆ ಬೆಳೆಗಾರರಿಗೆ ಕೆ.ಜಿ.ಗೆ ₹700ರಷ್ಟಾದರೂ ಸಿಕ್ಕಿದರೆ ಅನುಕೂಲ. ಈ ಭಾಗದಲ್ಲಿ ಫಣಿಯೂರು ಜಾತಿಯ ಕಾಳುಮೆಣಸು ಬೆಳೆಯುವವರು ಹೆಚ್ಚು’ ಎನ್ನುತ್ತಾರೆ ಬೆಳೆಗಾರ ಬಂಟ್ವಾಳ ತಾಲ್ಲೂಕು ಮೆಣಸಿನಗಂಡಿಯ ಶಿವಪ್ರಸಾದ್.

‘ಮಂಗ, ನವಿಲು ಕಾಟದಿಂದ ಬೆಳೆ ಉಳಿಸಿಕೊಳ್ಳುವುದು ಸವಾಲು. ಜೊತೆಗೆ ಅಲ್ಲಲ್ಲಿ ಶೀಘ್ರ ಸೊರಗು ರೋಗ ಮತ್ತು ನಿಧಾನ ಸೊರಗು ರೋಗವೂ ಇದೆ. ತೋಟದಲ್ಲಿ ಅಡಿಕೆ ಮರಕ್ಕೆ ಹಬ್ಬುವ ಬಳ್ಳಿಯ ಮೇಲೆ, ಮರದ ಚಂಡೆ ಉದಿರು ಬಿದ್ದರೆ, ಬಳ್ಳಿಯೂ ಹಾಳಾಗುತ್ತದೆ. ಇವೆಲ್ಲ ಸಮಸ್ಯೆಗಳಿದ್ದರೂ, ಕಾಳುಮೆಣಸು ಖಚಿತ ಆದಾಯ ನೀಡುವ ಪರ್ಯಾಯ ಬೆಳೆ’ ಎಂದು ಅವರು ಪ್ರತಿಕ್ರಿಯಿಸಿದರು.

ಶಿವಪ್ರಸಾದ್ ಬೆಳೆಗಾರ
ಕಾಳುಮೆಣಸು ಅಡಿಕೆಗಿಂತ ಹೆಚ್ಚು ಲಾಭ ಕೊಡುವ ಬೆಳೆ ಮತ್ತು ದೀರ್ಘ ಕಾಲ ಸಂಗ್ರಹಿಸಿಟ್ಟುಕೊಂಡು ದರ ಬಂದಾಗ ಮಾರಾಟ ಮಾಡಬಹುದಾದ ಉತ್ಪನ್ನ
- ಶಿವಪ್ರಸಾದ್ ಮೆಣಸಿನಂಗಡಿ ಬೆಳೆಗಾರ
‘ಕಾಳುಮೆಣಸು ಬೆಳೆಯಲು ಆಸಕ್ತಿ’
‘ಐದು ವರ್ಷಗಳಲ್ಲಿ ಸುಮಾರು 13 ಸಾವಿರ ಹೆಕ್ಟೇರ್‌ನಷ್ಟು ಕಾಳುಮೆಣಸು ಪ್ರದೇಶ ವಿಸ್ತರಣೆಯಾಗಿರುವುದು ದಾಖಲಾಗಿದೆ. ಇದರಲ್ಲಿ ಈ ಹಿಂದೆ ಬೆಳೆಯುವ ಪ್ರದೇಶವೂ ಕೆಲ ಪ್ರಮಾಣದಲ್ಲಿ ಸೇರಿಕೊಂಡಿದೆ. ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಮಾಡುತ್ತಿರುವ ಕಾರಣ ಬೆಳೆಯ ವಿವರ ದಾಖಲಾಗುತ್ತಿದೆ. ಜೊತೆ ಇಲಾಖೆಯ ಹಲವಾರು ಯೋಜನೆಗಳು ಕಾಳುಮೆಣಸು ಬೆಳೆಯಲು ಸಹಕಾರಿಯಾಗಿವೆ. ಉತ್ತಮ ದರ ಇರುವ ಕಾರಣ ರೈತರೂ ಬೆಳೆಯಲು ಉತ್ಸಾಹ ತೋರುತ್ತಿದ್ದಾರೆ’ ಎಂದು ತೋಟಗಾರಿಕಾ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಪ್ರವೀಣ್ ಮಾಹಿತಿ ನೀಡಿದರು. ಅಡಿಕೆ ಹಳದಿ ರೋಗ ಕಂಡು ಬಂದ ಪ್ರದೇಶಗಳಲ್ಲಿ ಪರ್ಯಾಯ ಬೆಳೆಯಾಗಿ ಕಾಳುಮೆಣಸು ಬೆಳೆಯಲು ನೆರವು ನೀಡಲಾಗುತ್ತಿದೆ. ಪ್ರದೇಶ ವಿಸ್ತರಣೆಗೆ ಕಾಳುಮೆಣಸು ತೋಟ ಪುನಶ್ಚೇತನಕ್ಕೆ ಇಲಾಖೆ ನೆರವು ನೀಡುತ್ತದೆ ಎಂದು ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.