ಸುರತ್ಕಲ್: ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಇಲ್ಲಿಗೆ ಸಮೀಪದ ಬೈಕಂಪಾಡಿಯ ಕುಕ್ಕಾಡಿ ಕುಟುಂಬದ ಫಾತಿಮಾ ರಜೀನಾ (60) ಮೃತಪಟ್ಟಿದ್ದಾರೆ.
ಇವರು ಕುಕ್ಕಾಡಿ ಅಬ್ದುಲ್ ಖಾದರ್ ಅವರ ಪತ್ನಿ. ದುಬೈಯಲ್ಲಿ ನೆಲೆಸಿರುವ ಇವರು ರಜೆ ನಿಮಿತ್ತ ಕೊಲಂಬೋಕ್ಕೆ ತೆರಳಿದ್ದರು.
ಅಬ್ದುಲ್ ಖಾದರ್ ದುಬೈನಲ್ಲಿ ಕೆಮಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಾಸರಗೋಡು ಮೊಗ್ರಾಲ್ ಪುತ್ತೂರು ಮೂಲದ ಫಾತಿಮಾ ರಜೀನಾ ಅವರ ಕುಟುಂಬ ವರ್ಗ ಇದೀಗ ಕೊಲಂಬೊದಲ್ಲಿ ನೆಲೆಸಿದೆ. ಹೀಗಾಗಿ ಶ್ರೀಲಂಕಾಕ್ಕೆ ಆಗಾಗ ಹೋಗುತ್ತಿದ್ದರು.
ಅಬ್ದುಲ್ ಖಾದರ್ ಮತ್ತು ರಜೀನಾ ಅವರು ಹೋಟೆಲ್ ಸೆಂಡ್ರಿಲಾ ರೂಮ್‌ನಲ್ಲಿ ವಾಸ್ತವ್ಯ ಇದ್ದರು. ಅಬ್ದುಲ್ ಖಾದರ್ ಅವರು ಭಾನುವಾರ ಬೆಳಿಗ್ಗೆ ದುಬೈಗೆ ತೆರಳಿದ್ದರು. ಅವರನ್ನು ವಿಮಾನನಿಲ್ದಾಣಕ್ಕೆ ಬಿಟ್ಟು ಬಂದ ರಜೀನಾ ಅವರು ಹೋಟೆಲ್‌ಗೆ ಉಪಾಹಾರ ಸೇವಿಸಲು ತೆರಳಿದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟದಲ್ಲಿ ಸಿಲುಕಿಕೊಂಡರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಾಂಬ್ ಸ್ಪೋಟ ಸಂಭವಿಸಿದ ಬಳಿಕ ರಜೀನಾ ಅವರು ನಾಪತ್ತೆಯಾಗಿದ್ದರು. ನಂತರ ಅವರ ಶವ ಪತ್ತೆಯಾಯಿತು. ರಜೀನಾ ಅವರಿಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದು, ಅವರು ಅಮೆರಿಕದಲ್ಲಿ ಎಂಜಿನಿಯರ್ ಆಗಿದ್ದಾರೆ. ಭಾನವಾರದ ಮಧ್ಯಾಹ್ನದ ವಿಮಾನದಲ್ಲಿ ಮಂಗಳೂರಿಗೆ ಬರಲು ಅವರು ಟಿಕೆಟ್ ಕಾಯ್ದಿರಿಸಿದ್ದರು. ಮಂಗಳೂರಿನಿಂದ ದುಬೈಗೆ ತೆರಳಲು ಅವರು ಯೋಜಿಸಿದ್ದರು.
ಭಾನುವಾರ ಬೆಳಗ್ಗೆ ಶ್ರೀಲಂಕಾದಲ್ಲಿ 6 ಸರಣಿ ಬಾಂಬ್ ಸ್ಫೋಟ ನಡೆದಿದೆ.ಇಲ್ಲಿನ ಮೂರು ಚರ್ಚ್ ಮತ್ತು ಎರಡು ಐಷಾರಾಮಿ ಹೋಟೆಲ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು 156 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ 35 ಮಂದಿ ಹೊರ ರಾಷ್ಟ್ರದವರಾಗಿದ್ದಾರೆ.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.