ಮಂಗಳೂರು: ‘ನನ್ನ ಸಾಧನೆಗೆ ಅಮ್ಮನೇ ನೆರಳಾಗಿ ನಿಂತವರು. ನನ್ನ ಎಲ್ಲ ಪಾಠಗಳನ್ನು ಅಮ್ಮ ತನ್ನ ಧ್ವನಿಯಲ್ಲಿ ದಾಖಲಿಸಿ, ನನಗೆ ಅಧ್ಯಯನಕ್ಕೆ ನೆರವಾದರು’ ಎನ್ನುವಾಗ, ಚಿನ್ನದ ಹುಡುಗ ಅನ್ವಿತ್ ಜಿ. ಕುಮಾರ್ ಭಾವುಕರಾದರು.
ಎಂ.ಎ. ರಾಜ್ಯಶಾಸ್ತ್ರದಲ್ಲಿ ಪ್ರಥಮ ರ್‍ಯಾಂಕ್ ಪಡೆದ ಕುಂಪಲದ ಅನ್ವಿತ್ ಅವರಿಗೆ ಶನಿವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ 40ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್, ಚಿನ್ನದ ಪದಕದ ಜತೆಗೆ ಮೂರು ನಗದು ಬಹುಮಾನ ವಿತರಿಸಿದರು. ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಅವರು 2018–19ನೇ ಸಾಲಿನಲ್ಲಿ ಪ್ರಥಮ ರ್‍ಯಾಂಕ್ ಗಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.
‘ಸ್ನಾತಕೋತ್ತರ ಪದವಿಯಲ್ಲೂ ರ್‍ಯಾಂಕ್ ಗಳಿಸುವ ಆಸೆ ಇತ್ತು. ಹಾಸ್ಟೆಲ್‌ನಲ್ಲಿದ್ದ ನನಗೆ ಸಹಪಾಠಿಗಳು, ಹಾಸ್ಟೆಲ್ ಸ್ನೇಹಿತರು ಇ–ಮಟೀರಿಯಲ್‌ಗಳೆಲ್ಲವನ್ನು ಒದಗಿಸಿದರು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಓದಿ ಹೇಳುತ್ತಿದ್ದರು. ಪ್ರಾಧ್ಯಾಪಕರು ಸದಾ ಪ್ರೋತ್ಸಾಹಿಸುತ್ತಿದ್ದರು. ಎಲ್ಲರ ಬೆಂಬಲದಿಂದ ಸಾಧನೆ ಸಾಧ್ಯವಾಯಿತು’ ಎಂದು ಅನ್ವಿತ್ ನೆರವಾದ ಎಲ್ಲರನ್ನೂ ನೆನಪಿಸಿಕೊಂಡರು.
ಅನ್ವಿತ್ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯವರು. ಅವರು ಯುಕೆಜಿಯಲ್ಲಿರುವಾಗ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಯಾದವಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಆರನೇ ತರಗತಿಯವರೆಗೆ ಸಾಮಾನ್ಯ ಬಾಲಕರಂತೆ ಇದ್ದ ಅನ್ವಿತ್‌ಗೆ ನಂತರ ಕಣ್ಣಿನಲ್ಲಿ ತೊಂದರೆ ಕಾಣಿಸಿಕೊಂಡು, ನಂತರ ಪೂರ್ಣ ಅಂಧತ್ವ ಬಾಧಿಸಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪರೀಕ್ಷೆಗಳಂತೆ ಸ್ನಾತಕೋತ್ತರ ಪದವಿಯನ್ನು ಕೂಡ ಅವರು ಲಿಪಿಕಾರರ ಸಹಾಯದಿಂದ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.