ADVERTISEMENT

ವಿಶ್ವಹಿಂದೂ ಪರಿಷತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಅಶೋಕ್ ರೈ ನಡೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 13:55 IST
Last Updated 24 ಅಕ್ಟೋಬರ್ 2024, 13:55 IST
ಬಿ.ಎಂ.ಭಟ್
ಬಿ.ಎಂ.ಭಟ್   

ಪುತ್ತೂರು: ‘ಬಿಜೆಪಿ, ಸಂಫಪರಿವಾರಕ್ಕೆ ಸೇರಿದ ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪುತ್ತೂರಿನ ಶಾಸಕ ಅಶೋಕ್‌ಕುಮಾರ್‌ ರೈ ಅವರ ನಡೆ-ವರ್ತನೆ ಖಂಡನೀಯ. ಕೋಮುವಾದಿ ಸಂಘಟನೆಗಳನ್ನು ಬೆಂಬಲಿಸುವ ಶಾಸಕ ಅಶೋಕ್‌ಕುಮಾರ್‌ ರೈ ಅವರ ನಡವಳಿಕೆಯ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷಕ್ಕೂ ಇದ್ದು, ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಭಾಗಿಯಾದ ಅವರ ನಡೆಯ ಕುರಿತು ಕಾಂಗ್ರೆಸ್ ಸ್ಪಷ್ಟೀಕರಣ ನೀಡಬೇಕು’ ಎಂದು ಸಿಪಿಎಂ ಮುಖಂಡ ಬಿ.ಎಂ.ಭಟ್ ಆಗ್ರಹಿಸಿದ್ದಾರೆ.

‘ಅಶೋಕ್‌ಕುಮಾರ್ ರೈ ಅವರು ಬಿಜೆಪಿಯಿಂದ ವಲಸೆ ಬಂದವರಾಗಿದ್ದರೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾರಣದಿಂದಾಗಿಯೇ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮತದಾರರ ಜತೆಗೆ ಜಾತ್ಯತೀತ ಮತದಾರರು, ಅಲ್ಪಸಂಖ್ಯಾತ ಸಮುದಾಯಗಳ ಮತದಾರರು ಒಗ್ಗಟ್ಟಿನಿಂದ ಮತ ನೀಡಿದ್ದರು. ಅಲ್ಪಸಂಖ್ಯಾತರು, ಜಾತ್ಯತೀತರು, ಎಡ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂಬ ನೆಲೆಯಲ್ಲಿ ಅವರಿಗೆ ಮತಚಲಾಯಿಸಿದ್ದರೇ ಹೊರತು ಅಶೋಕ್‌ಕುಮಾರ್ ರೈ ಎಂದಲ್ಲ. ಕಾಂಗ್ರೆಸ್ ಪಕ್ಷವು ಅದರ ಜಾತ್ಯಾತೀತ ಸಿದ್ಧಾಂತದಂತೆ ಸಂಘಪರಿವಾರದ ಕೋಮುವಾದದ ವಿರುದ್ಧ ನಿಲ್ಲುತ್ತದೆ ಎಂಬ ನಂಬಿಕೆಯೂ ಅಶೋಕ್‌ಕುಮಾರ್‌ ರೈ ಅವರ ಪರ ಮತ ಚಲಾಯಿಸಲು ಕಾರಣವಾಗಿತ್ತು’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಹಿಂದೂ ಧರ್ಮಕ್ಕೂ, ಬಿಜೆಪಿ ಜತೆಗಿರುವ ಈ ಸಂಘಟನೆಗಳಿಗೂ ಯಾವುದೆ ಸಂಬಂಧ ಇಲ್ಲ. ಈ ಸಂಘಟನೆಗಳು ಹಿಂದೂ ಧರ್ಮದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿಗೆ ರಾಜಕೀಯ ಲಾಭ ತಂದುಕೊಡುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಾ ಬಂದಿರುವುದು ರಾಜಕೀಯದ ಪ್ರಾಥಮಿಕ ತಿಳುವಳಿಕೆ ಇರುವ ಎಲ್ಲರಿಗೂ ತಿಳಿದಿದೆ. ಬಹು ಸಂಖ್ಯಾತ ಹಿಂದೂಗಳು ಬಿಜೆಪಿಯ ಈ ವರ್ತುಲದಿಂದ ಹೊರಗಿದ್ದಾರೆ. ಈ ಕಟು ವಾಸ್ತವ ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ ಅಥವಾ ಇತರ ಜಾತ್ಯತೀತ ಪಕ್ಷಗಳ ನಾಯಕರು ಕೋಮುವಿಷ ಬೀಜ ಬಿತ್ತುವ ಸಂಘಟನೆಗಳನ್ನು ಪರೋಕ್ಷವಾಗಿ ಬೆಳೆಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.