ADVERTISEMENT

ಮಂಗಳೂರು: ಬೋಚಿ ಆಟದಲ್ಲಿ ಮಿಂಚಿದ ವಿಶೇಷ ಮಕ್ಕಳು

ವಿಶ್ವ ಡೌನ್ಸ್ ಸಿಂಡ್ರೋಮ್ ದಿನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 14:03 IST
Last Updated 21 ಮಾರ್ಚ್ 2024, 14:03 IST
ಬೋಚಿ ಸ್ಪರ್ಧೆಯಲ್ಲಿ ಚೆಂಡನ್ನು ತೂರಿಬಿಟ್ಟ ಬಾಲಕಿ
ಬೋಚಿ ಸ್ಪರ್ಧೆಯಲ್ಲಿ ಚೆಂಡನ್ನು ತೂರಿಬಿಟ್ಟ ಬಾಲಕಿ   

ಮಂಗಳೂರು: ಶಕ್ತಿನಗರದ ಸಾನಿಧ್ಯ ಶಾಲೆಯಲ್ಲಿ ಗುರುವಾರ ಮಕ್ಕಳ ಕಲರವ. ಸಾಲಿನಲ್ಲಿ ನಿಂತ ಮಕ್ಕಳಿಗೆ ಬಿಳಿ, ಕೆಂಪು, ಹಸಿರು ಚೆಂಡನ್ನು ಎತ್ತಿ ತೂರಿ ಬಿಡುವ ತವಕ. ಶಿಸ್ತಿನ ಸಿಪಾಯಿಗಳಂತೆ ಒಬ್ಬೊಬ್ಬರಾಗಿ ಬಂದ ಮಕ್ಕಳು ಚೆಂಡನ್ನು ತೂರಿ ಬಿಡುತ್ತಿದ್ದರೆ ಶಿಕ್ಷಕರಿಂದ ಪ್ರೋತ್ಸಾಹದ ಚಪ್ಪಾಳೆ.

ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯು ವಿಶ್ವ ಡೌನ್ಸ್ ಸಿಂಡ್ರೋಮ್ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಬೋಚಿ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 14 ಶಾಲೆಗಳ ಸುಮಾರು 110 ಮಕ್ಕಳು ಭಾಗವಹಿಸಿದ್ದರು.

ಕೆನರಾ ಬ್ಯಾಂಕ್ ಶಕ್ತಿನಗರ ಶಾಖೆಯ ಹಿರಿಯ ವ್ಯವಸ್ಥಾಪಕ ಪ್ರವೀರ್ ವಿ.ಬಿ ಬೋಚಿ ಚೆಂಡನ್ನು ತೂರಿ ಬಿಡುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು. ಸಾಮಾನ್ಯ ಮಕ್ಕಳಿಗಿಂತ ಭಿನ್ನವಾಗಿರುವ ಮಕ್ಕಳಲ್ಲಿ ವಿಶೇಷ ಸಾಮರ್ಥ್ಯ ಇರುತ್ತದೆ. ಅವರಿಗೆ ಶಿಕ್ಷಣ ನೀಡುವ ಶಿಕ್ಷಕರ ಶ್ರಮ ಶ್ಲಾಘನೀಯ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ಮಾತನಾಡಿ, ಭಿನ್ನ ಸಾಮರ್ಥ್ಯದ ಮಕ್ಕಳು ಎಲ್ಲ ವಿಭಾಗಗಳಲ್ಲಿ ಮುಂದೆ ಬಂದು, ಮುಖ್ಯವಾಹಿನಿಯಲ್ಲಿ ಸೇರಬೇಕು ಎಂದು ಆಶಿಸಿದರು.

 ಖಜಾಂಚಿ ಜಗದೀಶ್ ಶೆಟ್ಟಿ ಇದ್ದರು. ಸುಮಾ ಡಿಸಿಲ್ವ ಸ್ವಾಗತಿಸಿದರು. ಪ್ರಾಂಶುಪಾಲೆ ಮೀನಾಕ್ಷಿ ಎಂ.ಕೆ. ವಂದಿಸಿದರು. ಗ್ರೇಸಿ ಐ. ಬ್ರಗಾಂಝ ನಿರೂಪಿಸಿದರು.

‘ವಿಶೇಷ ಮಕ್ಕಳಿಗೆ ಅಕ್ಷರ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ ಕಲಿಸುವುದು ಮಹತ್ವದ್ದು. ವ್ಯಾವಹಾರಿಕ ಜ್ಞಾನ, ಸಮಯ ಪ್ರಜ್ಞೆ ಕಲಿಸುವ ಮೂಲಕ ಅವರನ್ನು ಸ್ವತಂತ್ರ ವ್ಯಕ್ತಿಗಳನ್ನಾಗಿ ಮಾಡಬೇಕಾಗಿದೆ. ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಇದಕ್ಕೆ ಪೂರಕವಾಗಿವೆ’ ಎನ್ನುತ್ತಾರೆ ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ.

‘ಕ್ರೀಡಾಕೂಟಕ್ಕೆ ಬಹುದಿನಗಳಿಂದ ಸಿದ್ಧತೆ ನಡೆಸುತ್ತೇವೆ. ಮಕ್ಕಳಿಗೆ ಮೊದಲು ಬಣ್ಣದ ಗುರುತು ಹೇಳಿಕೊಟ್ಟು, ಮೆತ್ತನೆಯ ಚೆಂಡು ಎಸೆಯುವುದನ್ನು ಕಲಿಸಬೇಕಾಗುತ್ತದೆ. ಉಳಿದ ಮಕ್ಕಳಂತೆ ಈ ಮಕ್ಕಳು ಎಲ್ಲವನ್ನೂ ಕಲಿಯುತ್ತಾರೆ. ಆದರೆ, ಕಲಿಕೆಯ ಹಂತ ತುಸು ನಿಧಾನ ಅಷ್ಟೆ. ಕಲಿಸುವ ಶಿಕ್ಷಕರಿಗೆ ತಾಳ್ಮೆ ಬೇಕು’ ಎಂದು ಮೂಡುಬಿದಿರೆ ಸ್ಫೂರ್ತಿ ಶಾಲೆಯ ಶಿಕ್ಷಕಿ ಸಂಧ್ಯಾ ಅಭಿಪ್ರಾಯ ವ್ಯಕ್ತಪಡಿಸಿದರು. 

ವಿಶ್ವ ಡೌನ್‌ ಸಿಂಡ್ರೋಮ್ ದಿನದ ಅಂಗವಾಗಿ ನಡೆದ ಬೋಚಿ ಕ್ರೀಡಾಕೂಟವನ್ನು ಪ್ರವೀರ್ ವಿ.ಬಿ ಅವರು ವಿಶೇಷ ಮಕ್ಕಳ ಜೊತೆಗೂಡಿ ಉದ್ಘಾಟಿಸಿದರು

ಬೋಚಿ ಚಾಂಪಿಯನ್‌ಷಿಪ್

ವಿಜೇತರು ಪುರುಷರ ವಿಭಾಗ: ಮಾನಸ ವಿಶೇಷ ಶಾಲೆ ಉಡುಪಿ ಪ್ರಥಮ ಆಶಾ ನಿಲಯ ವಿಶೇಷ ಶಾಲೆ ಉಡುಪಿ ದ್ವಿತೀಯ ಸೇಂಟ್ ಮೇರಿಸ್ ವಿಶೇಷ ಶಾಲೆ ಕಿನ್ನಿಗೋಳಿ ತೃತೀಯ. ಮಹಿಳೆಯರ ವಿಭಾಗ: ಸಾನಿಧ್ಯ ವಿಶೇಷ ಶಾಲೆ ಶಕ್ತಿನಗರ ಪ್ರಥಮ ಸೇಂಟ್ ಆಗ್ನೆಸ್ ವಿಶೇಷ ಶಾಲೆ ಮಂಗಳೂರು ದ್ವಿತೀಯ ಮಾನಸ ವಿಶೇಷ ಶಾಲೆ ಉಡುಪಿ ತೃತೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.