ADVERTISEMENT

ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 5:29 IST
Last Updated 11 ಜೂನ್ 2024, 5:29 IST

ಮುಡಿಪು (ದಕ್ಷಿಣ ಕನ್ನಡ): ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಯುಕ್ತ ಭಾನುವಾರ ರಾತ್ರಿ ವಿಜಯೋತ್ಸವ ಮುಗಿಸಿ ಮರಳುತ್ತಿದ್ದ ಬಿಜೆಪಿಯ ಇಬ್ಬರು ಕಾರ್ಯಕರ್ತರಿಗೆ ಉಳ್ಳಾಲ ತಾಲ್ಲೂಕಿನ ಬೋಳಿಯಾರ್‌ನಲ್ಲಿ ಚೂರಿಯಿಂದ ಇರಿಯಲಾಗಿದೆ. ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಬೋಳಿಯಾರ್‌ ನಿವಾಸಿಗಳಾದ ಮೊಹಮ್ಮದ್ ಶಾಕಿರ್ (28), ಅಬ್ದುಲ್ ರಜಾಕ್‌ (40), ಅಬೂಬಕರ್ ಸಿದ್ಧಿಕ್‌ (35), ಸವದ್‌ (18), ಮೋನು ಅಲಿಯಾಸ್‌ ಹಫೀಜ್‌ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರಾಗಿರುವ ಇನ್ನೋಳಿ ಧರ್ಮನಗರದ ನಿವಾಸಿಗಳಾದ ಹರೀಶ್ (41) ಹಾಗೂ ನಂದಕುಮಾರ (24) ಚೂರಿ ಇರಿತಕ್ಕೆ ಒಳಗಾದವರು. ಅದೇ ಊರಿನ ಕಿಶನ್‌ ಕುಮಾರ್ ಹಲ್ಲೆಗೊಳಗಾದವರು. ಚೂರಿ ಇರಿತಕ್ಕೊಳಗಾದ ಇಬ್ಬರು ಗಾಯಾಳುಗಳಿಗೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

'ವಿಜಯೋತ್ಸವ ನಿರತ ಬಿಜೆಪಿ ಕಾರ್ಯಕರ್ತರು ಬೋಳಿಯಾರ್ ಮಸೀದಿ ಬಳಿ ಧ್ವನಿವರ್ಧಕದಲ್ಲಿ ಗಟ್ಟಿಯಾಗಿ ಹಾಡುಗಳನ್ನು ಹಾಕಿದ್ದಲ್ಲದೇ, ಕೆಲ ಹೊತ್ತು ಘೋಷಣೆ ಕೂಗಿದ್ದರು‌. 20-30 ಮುಸ್ಲಿಂ ಯುವಕರ ಗುಂಪು ಅವರನ್ನು ಬೈಕ್‌ಗಳಲ್ಲಿ ಹಿಂಬಾಲಿಸಿತ್ತು. ಬೋಳಿಯಾರ್ ಸಮಾಧಾನ್ ಬಾರ್ ಆ್ಯಂಡ್‌ ರೆಸ್ಟೋರೆಂಟ್‌ ಬಳಿ ಬಿಜೆಪಿ ಕಾರ್ಯಕರ್ತರನ್ನು ಮುಸ್ಲಿಂ ಯುವಕರು ಅಡ್ಡಗಟ್ಟಿದ್ದರು. ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಹರೀಶ್‌ ಹಾಗೂ ನಂದ ಕುಮಾರ್‌ ಅವರಿಗೆ ಚೂರಿಯಿಂದ ಇರಿದು, ಕಿಶನ್‌ ಕುಮಾರ್‌ ಮೇಲೆ ಹಲ್ಲೆ ನಡೆಸಲಾಗಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೋಳಿಯಾರ್‌ನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಶಸ್ತ್ರ ಮೀಸಲು ಪಡೆಯ ಮೂರು ವಾಹನಗಳು ಭಾನುವಾರ ರಾತ್ರಿಯಿಂದಲೇ ಊರಿನಲ್ಲಿ ಬೀಡು ಬಿಟ್ಟಿವೆ.  

ಕೃತ್ಯ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿಯ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಕೊಣಾಜೆ ಠಾಣೆಗೆ ಭಾನುವಾರ ರಾತ್ರಿ ಮುತ್ತಿಗೆ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.