ADVERTISEMENT

ಬೋಳಿಯಾರು ಪ್ರಕರಣ| ಒಂದು ಮನೆಯಲ್ಲಿ ಆಗಿರುವ ಘಟನೆ: ಅಭಿಷೇಕ್ ಉಳ್ಳಾಲ್

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:40 IST
Last Updated 13 ಜೂನ್ 2024, 14:40 IST

ಉಳ್ಳಾಲ: ‘ಬೋಳಿಯಾರು ಚೂರಿ ಇರಿತ ಪ್ರಕರಣ ಒಂದು ಮನೆಯಲ್ಲಿ ಆದ ಘಟನೆ. ಇದು, ಶಾಸಕರನ್ನು ಸೋಲಿಸಲು ಜಂಟಿಯಾಗಿ ಪ್ರಯತ್ನಿಸಿದ ಎರಡು ಪಕ್ಷದವರ ನಡುವೆ ನಡೆದಿರುವ ಘಟನೆಯಾದರೂ, ಕಾನೂನು ಪರ ಇರುವ ಶಾಸಕರ ಮೇಲೆ ಬಿಜೆಪಿ ಮುಖಂಡರು ಹಾಗೂ ಬಿಜೆಪಿಯ  ಶಾಸಕರು ಆರೋಪ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ್ ಹೇಳಿದರು.

ತೊಕ್ಕೊಟ್ಟುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆ ಸಂದರ್ಭ ಶಾಸಕರನ್ನು ಸೋಲಿಸಲು ಜಂಟಿಯಾಗಿ ಹೋರಾಟ ನಡೆಸಿದವರೇ ತಮ್ಮೊಳಗೆ ಹೋರಾಟ ನಡೆಸುತ್ತಾ ಇದ್ದಾರೆ. ಇದೀಗ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಭಾರತ್ ಮಾತಾ ಕಿ ಜೈ ಪ್ರಚೋದನಕಾರಿ ಎಂದು ಕಾಂಗ್ರೆಸ್ ಹೇಳುವುದಿಲ್ಲ’ ಎಂದರು.

‘ಅಲ್ಲಿ ನಡೆದಿರುವ ನೈಜ ವಿಚಾರವನ್ನು ಹೇಳಬೇಕು. ಶಾಸಕರು ಕಾನೂನು ವ್ಯಾಪ್ತಿಯ ಕೆಲಸಕಾರ್ಯಗಳನ್ನು ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ರ‍್ಯಾಲಿ ನಡೆಸಿದವರು ಇಲಾಖೆಯ ಅನುಮತಿಯನ್ನೇ ಪಡೆಯದೆ ಇರುವ ಸಂಶಯವೂ ಇದೆ. ಪಕ್ಷದ ವಿಜಯೋತ್ಸವ ವೇಳೆ ಕಾರ್ಯಕರ್ತರು ಹೇಗೆ ನಡೆದುಕೊಳ್ಳಬೇಕು ಎಂದು ಮುಖಂಡರು ತಿಳಿಸಬೇಕು. ಅದನ್ನು ಬಿಟ್ಟು ಶಾಸಕರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಯು.ಟಿ.ಖಾದರ್ ಅವರಿಗೆ ವೈರಿಗಳು ಎಂದು ಇರುವುದಾದರೆ ಕಾನೂನು ವಿರುದ್ಧವಾಗಿ ಇರುವವರು ಮಾತ್ರ. ಬೋಳಿಯಾರು ಪ್ರಕರಣದಲ್ಲಿ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧಾರದಲ್ಲಿ ತನಿಖೆ ನಡೆಯುತ್ತಿದ್ದು, ಸತ್ಯಾಂಶವನ್ನು ಪೊಲೀಸ್ ಇಲಾಖೆ ಜನರ ಮುಂದೆ ತಂದಿದೆ’ ಎಂದರು.

ADVERTISEMENT

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ.ರವೂಫ್, ಯುವ ಕಾಂಗ್ರೆಸ್ ಅಧ್ಯಕ್ಷ ಫಿರೋಝ್ ಮಲಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.