ADVERTISEMENT

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ: ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 23:21 IST
Last Updated 28 ಡಿಸೆಂಬರ್ 2023, 23:21 IST
ಮಂಗಳೂರು ವಿಮಾನನಿಲ್ದಾಣ
ಮಂಗಳೂರು ವಿಮಾನನಿಲ್ದಾಣ   

ಮಂಗಳೂರು: ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದೇವೆ ಎಂಬ ಬೆದರಿಕೆ ಸಂದೇಶ ಬಂದಿದ್ದು, ಆ ಪರಿಸರದಲ್ಲಿ ಬಿಗಿ ಭದ್ರತೆಗೆ ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

‘ಮಂಗಳೂರು ವಿಮಾನ ನಿಲ್ದಾಣವೂ ಸೇರಿದಂತೆ ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಬಾಂಬ್‌ ಬೆದರಿಕೆಗೆ ಸಂಬಂಧಿಸಿ ಇದೇ 26ರಂದು ರಾತ್ರಿ 12 ಗಂಟೆ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಇಮೇಲ್ ಸಂದೇಶ ಬಂದಿದೆ. ‘ನಿಮ್ಮಲ್ಲಿರುವ ವಿಮಾನವೊಂದರಲ್ಲಿ ಅಷ್ಟೇ ಅಲ್ಲ, ವಿಮಾನ ನಿಲ್ದಾಣದ ಒಳಗೆ ಸ್ಫೋಟಕ ವಸ್ತು ಇದೆ. ಅವುಗಳನ್ನು ಅಡಗಿಸಿಡಲಾಗಿದೆ. ಕೆಲವೇ ಗಂಟೆಗಳಲ್ಲಿ ಅದು ಸ್ಫೋಟಿಸಲಿದೆ. ನಿಮ್ಮನ್ನೆಲ್ಲ ಕೊಂದು ಹಾಕುತ್ತೇನೆ’ ಎಂಬ ಸಂದೇಶ ಅದರಲ್ಲಿತ್ತು. ಅದನ್ನು ಕಳುಹಿಸಿದ ವ್ಯಕ್ತಿ ನಮ್ಮದು ‘ಫ್ಯೂನಿಂಗ್‌’ ಎಂಬ ಉಗ್ರಗಾಮಿ ಗುಂಪು’ ಎಂದು ಹೇಳಿಕೊಂಡಿದ್ದ. ಈ ಸಂದೇಶವನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಇದೇ 27ರಂದು ಬೆಳಿಗ್ಗೆ 11.30ಕ್ಕೆ ನೋಡಿದ್ದರು’ ಎಂದು ಅವರು ಮಾಹಿತಿ ನೀಡಿದರು.

‘ಈ ಕುರಿತು ಮಾಹಿತಿ ಸಿಕ್ಕ ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ವಸ್ತು ಪತ್ತೆಗೆ ಬಾಂಬ್‌ ನಿಷ್ಕ್ರಿಯ ದಳದಿಂದ ಸಮಗ್ರ ತಪಾಸಣೆ ನಡೆಸಿದ್ದೇವೆ. ಪರಿಸರದಲ್ಲಿ ಬಿಗಿ ಭದ್ರತೆಗೆ ಏರ್ಪಾಡು ಮಾಡಿದ್ದೇವೆ. ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿ ಜತೆಗೆ ಸಮನ್ವಯ ಸಭೆ ನಡೆಸಿದ್ದೇವೆ. ಹೆಚ್ಚುವರಿ ತಪಾಸಣಾ ಠಾಣೆಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ವಿಮಾನ ನಿಲ್ದಾಣದವರು ದೂರು ನೀಡಿದ್ದು, ನ್ಯಾಯಾಲಯದ ಅನುಮತಿ ಮೇರೆಗೆ ಬಜಪೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.