ADVERTISEMENT

ಬೊಂದೇಲ್ ನವೀಕೃತ ಚರ್ಚ್ ಉದ್ಘಾಟನೆ 18ಕ್ಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 7:17 IST
Last Updated 14 ನವೆಂಬರ್ 2024, 7:17 IST
ಸುದ್ದಿಗೋಷ್ಠಿಯಲ್ಲಿ ಮೇರಿ ಮಿರಾಂದಾ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಮೇರಿ ಮಿರಾಂದಾ ಮಾತನಾಡಿದರು   

ಮಂಗಳೂರು: ಬೊಂದೇಲ್‌ನ ಸೇಂಟ್ ಲಾರೆನ್ಸ್ ಚರ್ಚ್‌ನ ಶತಮಾನೋತ್ಸವ ಸಮಾರೋಪ, ನವೀಕೃತ ಚರ್ಚ್‌ ಉದ್ಘಾಟನೆ, ಸೇಂಟ್ ಲಾರೆನ್ಸ್‌ರ ಅಧಿಕೃತ ಪುಣ್ಯಕ್ಷೇತ್ರದ ಉದ್ಘಾಟನಾ ಕಾರ್ಯಕ್ರಮವು ನ.18ರಂದು ನಡೆಯಲಿದೆ ಎಂದು ಚರ್ಚ್‌ನ ಪ್ರಧಾನ ಧರ್ಮಗುರು ಆ್ಯಂಡ್ರೂ ಲಿಯೊ ಡಿಸೋಜ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅಂದು ಮಂಗಳೂರಿನ ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಅವರು ಅಧಿಕೃತ ಪುಣ್ಯ ಕ್ಷೇತ್ರದ ಘೋಷಣೆ ಮಾಡಲಿದ್ದಾರೆ. ವಿಶ್ರಾಂತ ಬಿಷಪ್ ಅಲೋಶಿಯಸ್‌ ಪಾವ್ಲ್ ಡಿಸೋಜ, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಭಾಗವಹಿಸುವರು. ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ನೂರು ಸಂವತ್ಸರಗಳನ್ನು ಪೂರೈಸಿರುವ ಚರ್ಚ್ ಈಗ ತ್ರಿವಳಿ ಸಂಭ್ರಮದಲ್ಲಿದೆ’ ಎಂದರು.

ಕೆಲವೇ ಕ್ರಿಶ್ಚಿಯನ್ ಕುಟುಂಬಗಳ ಸಹಕಾರದಲ್ಲಿ ಆರಂಭಗೊಂಡ ದೇವಾಲಯವು, ಪ್ರಸ್ತುತ 1,200ಕ್ಕಿಂತ ಹೆಚ್ಚು ಕುಟುಂಬಗಳ ಸಹಯೋಗದಲ್ಲಿ ಹೆಮ್ಮರವಾಗಿ ಬೆಳೆದಿದೆ. ಚರ್ಚ್‌ ಅಧೀನದಲ್ಲಿ ಸಂತ ಲಾರೆನ್ಸ್‌ರ ಹಿರಿಯ ಪ್ರಾಥಮಿಕ ಶಾಲೆ, ಸೇಂಟ್ ಲಾರೆನ್ಸ್‌ ಇಂಗ್ಲಿಷ್ ಮಾಧ್ಯಮ ನರ್ಸರಿ, ಪ್ರಾಥಮಿಕ ಶಾಲೆ ಇದೆ. ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಶಾಲೆಗೆ 16 ವರ್ಷಗಳ ಇತಿಹಾಸವಿದೆ ಎಂದರು.

ADVERTISEMENT

ಶತಮಾನದ ಹಿಂದೆ ಭಾರತಕ್ಕೆ ಬಂದಿದ್ದ ಫ್ರೆಂಚ್ ಧರ್ಮಗುರು ಅಲೆಕ್ಸಾಂಡರ್ ದುಬೋಯ್ಸ್ ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಫ್ರೆಂಚ್‌ನಲ್ಲಿ ‘ಬೊನ್‌ವೆಲ್’ (ಅತಿ ಸುಂದರ) ಎಂದು ಪ್ರಶಂಸಿಸಿದ ಸ್ಥಳ ಕಾಲ ಕ್ರಮೇಣ ಬೊಂದೇಲ್ ಎಂಬ ಹೆಸರಿಗೆ ಕಾರಣವಾಯಿತು ಎನ್ನುವ ಪ್ರತೀತಿ ಇದೆ. ಮಿಲಾಗ್ರಿಸ್‌ ಚರ್ಚ್‌ನ ಅಂದಿನ ಧರ್ಮಗುರು ಲುವಿಸ್ ಫರ್ನಾಂಡಿಸ್ ಪಚ್ಚನಾಡಿ ಗ್ರಾಮದ ಬಂಗೇರ ಸೀಮೆಯ ತೋಟದಲ್ಲಿ ಪ್ರಾರ್ಥನಾಲಯ ನಿರ್ಮಿಸಿದರು. ವಿವಿಧ ಹಂತಗಳಲ್ಲಿ ಅದು ಪ್ರಗತಿ ಕಂಡು ನಂತರ 1923ರಲ್ಲಿ ಚರ್ಚ್‌ ಆಗಿ ಘೋಷಣೆಯಾಯಿತು ಎಂದು ವಿವರಿಸಿದರು.

ಸಹಾಯಕ ಧರ್ಮಗುರು ವಿಲಿಯಂ ಡಿಸೋಜ, ಸೇಂಟ್ ಲಾರೆನ್ಸ್ ಶಾಲೆ ಪ್ರಾಂಶುಪಾಲ ಪೀಟರ್ ಗೊನ್ಸಾಲ್ವಿಸ್, ಉಪಾಧ್ಯಕ್ಷ ಜಾನ್ ಡಿಸಿಲ್ವ, ಪ್ರಕಾಶ್ ಪಿಂಟೊ, ಮೇರಿ ಮಿರಾಂದಾ, ಸಂಯೋಜಕಿ ಪ್ರೀತಿ ಡಿಸೋಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.