ADVERTISEMENT

ಭರತೇಶ ವೈಭವ ಜಿಜ್ಞಾಸೆ 2 ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 13:49 IST
Last Updated 5 ನವೆಂಬರ್ 2024, 13:49 IST
ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಮತ್ತು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭರತೇಶ ವೈಭವ ಜಿಜ್ಞಾಸೆ–2 ಕೃತಿಯನ್ನು ಪ್ರೊ.ವಿವೇಕ್ ರೈ ಬಿಡುಗಡೆ ಮಾಡಿದರು
ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಮತ್ತು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭರತೇಶ ವೈಭವ ಜಿಜ್ಞಾಸೆ–2 ಕೃತಿಯನ್ನು ಪ್ರೊ.ವಿವೇಕ್ ರೈ ಬಿಡುಗಡೆ ಮಾಡಿದರು   

ಮುಡಿಪು: ಜೀವನದಲ್ಲಿ ಯಾವುದೇ ಕ್ರಿಯೆಯಲ್ಲಿ ತೊಡಗಿಕೊಂಡಾಗ ತಲ್ಲೀನತೆಯೇ ಯಶಸ್ಸಿಗೆ ಕಾರಣವಾಗುತ್ತದೆ. ತಾದಾತ್ಮ್ಯವೇ ನಿಜವಾದ ಅಧ್ಯಾತ್ಮ. ರತ್ನಾಕರವರ್ಣಿಯು ಭರತೇಶ ವೈಭವದಲ್ಲಿ ಈ ತತ್ವವನ್ನು ನಿರೂಪಿಸಿದ್ದಾನೆ ಎಂದು ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಮತ್ತು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭರತೇಶ ವೈಭವ ಜಿಜ್ಞಾಸೆ 2 ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕವಿ ರತ್ನಾಕರವರ್ಣಿಯು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕರಾವಳಿಯಿಂದ ಮೂಡಿ ಬಂದ ಮಹತ್ವದ ಹೆಸರು. ತೆಲುಗು, ತುಳು, ಕನ್ನಡ ಭಾಷಾ ಸಮನ್ವಯದ ಆಶಯ ಆತನ ಕೃತಿಯಲ್ಲಿ ಮೂಡಿ ಬಂದಿದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಕನ್ನಡ ಭಾಷೆ ಸಾಹಿತ್ಯವು ಗುಂಪುಗಳಾಗಿ ಒಡೆಯದೆ ಒಳಗೊಳ್ಳುವ ಸಮನ್ವಯದ ಆಶಯವನ್ನು ಹೊಂದಿದೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಸಾಹಿತ್ಯವೇ ದೇವರು; ಬೇರೆ ಧರ್ಮವಿಲ್ಲ ಎಂದರು.

ಕರ್ನಾಟಕ ಜಾನಪದ ಅಕಾಡೆಮಿಯ ಜಿಶಂಪ ಜಾನಪದ ತಜ್ಞ ಪ್ರಶಸ್ತಿಗೆ ಭಾಜನರಾದ ಪ್ರೊ.ಕೆ.ಚಿನ್ನಪ್ಪ ಗೌಡ ಅವರನ್ನು ಗೌರವಿಸಲಾಯಿತು.

ಕರ್ನಾಟಕ ಸರ್ಕಾರ ನೀಡುವ ಕನಕಶ್ರೀ ಪ್ರಶಸ್ತಿ ಪಡೆದ ಪ್ರೊ.ಬಿ.ಶಿವರಾಮ ಶೆಟ್ಟಿ ಅವರನ್ನು ಗೌರವಿಸಲಾಯಿತು. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಸೋಮಣ್ಣ, ಪ್ರೊ.ನಾಗಪ್ಪ ಗೌಡ, ಧನಂಜಯ ಕುಂಬ್ಳೆ ಭಾಗವಹಿಸಿದ್ದರು.

ರತ್ನಾಕರವರ್ಣಿ ಪೀಠದ ಸಂಯೋಜಕ ಪ್ರೊ.ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿದರು. ರತ್ನಾಕರವರ್ಣಿ ಪೀಠದ ಸಂಶೋಧನಾ ಸಹಾಯಕ ಪ್ರಸಾದ್ ವಂದಿಸಿದರು. ಯಶುಕುಮಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.