ADVERTISEMENT

ಕಡೂರು | ಹಣ್ಣು ಕೀಳಲು ಹೋಗಿದ್ದ ಬಾಲಕ: ವಿದ್ಯುತ್ ಸ್ಪರ್ಶಿಸಿ ಸಾವು

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 15:21 IST
Last Updated 15 ಜೂನ್ 2024, 15:21 IST
ಮೃತ ಬಾಲಕನ ತಾಯಿಗೆ ಪ್ರಾಂಶುಪಾಲ ಧನರಾಜ್ ಚೆಕ್ ಅನ್ನು  ಹಸ್ತಾಂತರಿಸಿದರು. ಮಾಜಿ ಶಾಸಕ ವೈ.ಎಸ್.ವಿ.ದತ್ತ ಹಾಜರಿದ್ದರು
ಮೃತ ಬಾಲಕನ ತಾಯಿಗೆ ಪ್ರಾಂಶುಪಾಲ ಧನರಾಜ್ ಚೆಕ್ ಅನ್ನು  ಹಸ್ತಾಂತರಿಸಿದರು. ಮಾಜಿ ಶಾಸಕ ವೈ.ಎಸ್.ವಿ.ದತ್ತ ಹಾಜರಿದ್ದರು   

ಕಡೂರು: ತಾಲ್ಲೂಕಿನ ಕುಪ್ಪಾಳು ಮೊರಾರ್ಜಿ ವಸತಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಆಕಾಶ್ (13) ವಿದ್ಯುತ್ ಅಫಘಾತದಿಂದ ಶನಿವಾರ ಸಾವನ್ನಪ್ಪಿದ್ದಾನೆ.

ಶಾಲೆಯ ಆವರಣದಲ್ಲಿರುವ ನೇರಳೆ ಮರಕ್ಕೆ ನೇರಳೆಹಣ್ಣು ಕೀಳಲು ಆಕಾಶ್ ಸೇರಿದಂತೆ ಮೂವರು ವಿದ್ಯಾರ್ಥಿಗಳು ಹತ್ತಿದ್ದಾರೆ. ಈ ವೇಳೆ ಆಕಾಶ್ ಜಾರಿದ್ದಾನೆ. ಆಗ ಮರದ ಪಕ್ಕದಲ್ಲೇ ಹಾದು ಹೋಗಿರುವ ವಿದ್ಯುತ್ ತಂತಿ ಹಿಡಿದಿದ್ದು, ಕರೆಂಟ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾನೆ. ಶಾಲಾ ಸಿಬ್ಬಂದಿ ತಕ್ಷಣ ಕಡೂರು ಆಸ್ಪತ್ರೆಗೆ ಬಾಲಕನನ್ನು ಕರೆದೊಯ್ದರೂ ಪ್ರಯೋಜನವಾಗಿಲ್ಲ. ಬಾಲಕ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರು. ಇನ್ನಿಬ್ಬರು ಬಾಲಕರು ಅಪಾಯದಿಂದ ಪಾರಾಗಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಬಳಿ ಬಾಲಕನ ಕುಟುಂಬದವರ ರೋದನ ಮುಗಿಲುಮುಟ್ಟಿತ್ತು. ಈ ನಡುವೆ ಹುಲ್ಲೆಹಳ್ಳಿ ಗ್ರಾಮಸ್ಥರು ಮತ್ತು ಬಾಲಕನ ಕುಟುಂಬದವರು ಶಾಲೆಗೆ ಹೋಗಿ ಅಲ್ಲಿ ಏನು ಘಟನೆ ನಡೆಯಿತು ಎಂಬುದನ್ನು ಸಿಸಿಟಿವಿ ಕ್ಯಾಮೆರಾ ಫೂಟೇಜ್ ಮೂಲಕ ತಿಳಿದುಕೊಂಡರು. ಪಿಎಸ್‌ಐ ಪವನ್ ಕುಮಾರ್, ಇಒ ಸಿ.ಆರ್.ಪ್ರವೀಣ್, ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ADVERTISEMENT

ಮಾಜಿ ಶಾಸಕ ವೈ.ಎಸ್.ವಿ.ದತ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಮಣಿವಣ್ಣನ್ ನಿಯಮಾನುಸಾರ ಮೃತ ಬಾಲಕನಿಗೆ ಕೊಡಬಹುದಾದ ಪರಿಹಾರಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ನಂತರ ಶಾಲೆಯ ಪ್ರಾಂಶುಪಾಲ ಧನರಾಜ್ ಅವರು ₹5 ಲಕ್ಷ ಮೊತ್ತದ ಚೆಕ್ ಅನ್ನು ಮೃತ ಬಾಲಕನ‌ ತಾಯಿ ಲತಾ ಅವರಿಗೆ ಹಸ್ತಾಂತರಿಸಿದರು. ಕ್ರೈಸ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಮೂಲಕವೂ ನಿಯಮಾನುಸಾರ ಪರಿಹಾರ ದೊರೆಯಲಿದೆ ಎಂದು‌ ತಿಳಿಸಿದರು.

ಮೆಸ್ಕಾಂನಿಂದಲೂ ಮೃತ ಬಾಲಕನ ಕುಟುಂಬಕ್ಕೆ ನಿಯಮಾವಳಿ ಪ್ರಕಾರ ಸಿಗಬಹುದಾದ ಪರಿಹಾರ ದೊರೆಯಲಿದ್ದು, ಪ್ರಕರಣದ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದೇವೆ ಎಂದು ಮೆಸ್ಕಾಂ ಎಇಇ ತಿರುಪತಿ ನಾಯ್ಕ ತಿಳಿಸಿದರು.

ಆಕಾಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.