ಮಂಗಳೂರು: ತೋಕೂರು ನಿಲ್ದಾಣದಲ್ಲಿ ಸಿಗ್ನಲ್‌ಗಾಗಿ ಕಾಯುತ್ತಿದ್ದ ಗೂಡ್ಸ್ ರೈಲನ್ನು ಏರಿದ 16 ವರ್ಷದ ಬಾಲಕನಿಗೆ ವಿದ್ಯುತ್ ಆಘಾತವಾಗಿದೆ. ಇದರಿಂದ ಶೇ 50 ರಷ್ಟು ಸುಟ್ಟ ಗಾಯಗಳಾಗಿದ್ದು, ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಬಾಲಕರು ಸೇರಿ, ರೈಲ್ವೆ ಮಾರ್ಗದಲ್ಲಿ ನಿಂತಿದ್ದ ಎಲ್‌ಪಿಜಿ ಟ್ಯಾಂಕರ್ ಬೋಗಿಯ ಮೇಲೆ ಹಲ್ಲೆ ಸೆಲ್ಫಿ ತೆಗೆಯಲು ಯತ್ನಿಸುತ್ತಿದ್ದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು ಇಬ್ಬರನ್ನು ತಡೆದಿದ್ದಾರೆ. 16 ವರ್ಷದ ಮೊಹಮ್ಮದ್ ದಿಶಾನ್‌ಗೆ ವಿದ್ಯುತ್ ಶಾಕ್ ತಗಲಿದೆ.
ಈ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ 25 ಸಾವಿರ ವೋಲ್ಟ್‌ನಷ್ಟು ವಿದ್ಯುತ್ ಪ್ರವಹಿಸುತ್ತದೆ. ಪ್ರಯಾಣಿಕರು, ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಫಲಕಗಳನ್ನು ಹಾಕಲಾಗಿದೆ. ಅದಾಗ್ಯೂ ರೈಲಿನ ಬೋಗಿ, ಕಂಬಗಳನ್ನು ಸ್ಪರ್ಶಿಸುವ ಘಟನೆಗಳು ನಡೆಯುತ್ತಿವೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ತಂತಿ ಹಾಗೂ ವಿದ್ಯುತ್ ಸಂಪರ್ಕ ಹೊಂದಿರುವ ವಸ್ತುಗಳನ್ನು ಮುಟ್ಟಬಾರದು. ನಿಂತಿರುವ ರೈಲು ಬೋಗಿಗಳನ್ನು ಹತ್ತಬಾರದು. ಈ ಮಾರ್ಗದ ಮೇಲ್ಸೇತುವೆ, ಕೆಳಸೇತುವೆ, ವಿದ್ಯುತ್ ತಂತಿಯ ಮೇಲೆ ವಸ್ತುಗಳನ್ನು ಎಸೆಯಬಾರದು. ಈ ಭಾಗದಲ್ಲಿನ ಮರಗಿಡಗಳನ್ನು ಕತ್ತರಿಸಬಾರದು. ತಂತಿಯ 2 ಮೀಟರ್ ವ್ಯಾಪ್ತಿಯಲ್ಲಿ ಇಂತಹ ಚಟುವಟಿಕೆ ನಡೆಸಬಾರದು.
ರೈಲ್ವೆ ಕ್ರಾಸಿಂಗ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಸಾಮಗ್ರಿಗಳನ್ನು ವಾಹನಗಳಲ್ಲಿ ಸಾಗಿಸಬಾರದು. ನಿಗದಿತ ಎತ್ತರದಲ್ಲಿ ಮಾತ್ರ ವಾಹನಗಳು ಸಂಚರಿಸಬೇಕು ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.