ADVERTISEMENT

ಮಿದುಳು ನಿಷ್ಕ್ರಿಯಗೊಂಡ ಉಪನ್ಯಾಸಕಿಯ ಅಂಗಾಂಗ ದಾನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 7:16 IST
Last Updated 14 ನವೆಂಬರ್ 2024, 7:16 IST

ಮಂಗಳೂರು: ನಗರದ ಸೇಂಟ್‌ ಅಲೋಶಿಯಸ್ ಪದವಿ ಕಾಲೇಜಿನಲ್ಲಿ  ಉಪನ್ಯಾಸಕಿಯಾಗಿದ್ದ ಗ್ಲೋರಿಯಾ ಆಶಾ ರಾಡ್ರಿಗಸ್ (23) ಅವರ ಮಿದುಳು ನಿಷ್ಕ್ರಿಯಗೊಂಡಿದೆ. ಮನೆಯ ಮಗಳನ್ನು ಕಳೆದುಕೊಂಡ ನೋವಿನ ನಡುವೆಯೂ ಕುಟುಂಬದವರು ಆಕೆಯ ದೇಹದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸುವ ಮೂಲಕ ಇತರ ರೋಗಿಗಳಿಗೆ ನೆರವಾಗಿ ಸಾರ್ಥಕತೆ ಮೆರೆದಿದ್ದಾರೆ.

ಬಜಪೆಯ ಪಡುಪೆರಾರದ ಗ್ರೇಷನ್ ಅಲೆಕ್ಸ್ ರಾಡ್ರಿಗಸ್ ಮತ್ತು ಗ್ರೆಟ್ಟಾ ಫ್ಲೇವಿಯಾ ದಂಪತಿಯ ಪುತ್ರಿಯಾದ  ಗ್ಲೋರಿಯಾ  ವರ್ಷದ ಹಿಂದಷ್ಟೇ  ಸೇಂಟ್‌ ಅಲೋಶಿಯಸ್ ಕಾಲೇಜಿನಲ್ಲಿ ಎಂ.ಕಾಂ ಪೂರ್ಣಗೊಳಿಸಿದ್ದರು.  ಅದೇ ಕಾಲೇಜಿನಲ್ಲಿ 2024ರ ಜೂನ್‌ನಲ್ಲಿ ಉಪನ್ಯಾಸಕಿಯಾಗಿ ಉದ್ಯೋಗಕ್ಕೆ ಸೇರಿದ್ದರು. ತೀವ್ರತರವಾದ ಅಲರ್ಜಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ನ.8ರಂದು ಮಧ್ಯಾಹ್ನ ತಲೆಸುತ್ತು ಬಂದು ಬಿದ್ದಿದ್ದರು. ಅವರನ್ನು ತಕ್ಷಣವೇ ಫಾದರ್‌ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಕೆಯ ಎದೆಬಡಿತ ಮತ್ತು ಉಸಿರಾಟವನ್ನು ಮತ್ತೆ ಸಹಜ ಸ್ಥಿತಿಗೆ ತರಲು ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ.  ಆಕೆಯ ಮಿದುಳು ನಿಷ್ಕ್ರಿಯಗೊಂಡ ಲಕ್ಷಣಗಳು ಕಾಣಿಸಿದ್ದವು. ವಿವಿಧ ಪರೀಕ್ಷೆಗಳ ಬಳಿಕ ವೈದ್ಯರು, ಆಕೆಯ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ನ.11ರಂದು ಘೋಷಿಸಿದ್ದರು.

ಜಿಲ್ಲಾ ಮಟ್ಟದ 'ಜೀವ ಸಾರ್ಥಕ' ಘಟಕದ ನೆರವಿನಿಂದ ಹಾಗೂ ಕರ್ನಾಟಕ ಅಂಗ ದಾನ ಜಾಲದ ಮೂಲಕ ಗ್ಲೋರಿಯಾ ಅವರ ಅಂಗಾಂಗ ದಾನಕ್ಕೆ ಫಾದರ್‌ ಮುಲ್ಲರ್‌ ವೈದ್ಯಕೀಯ ಆಸ್ಪತ್ರೆಯವರು ಕ್ರಮ ವಹಿಸಿದರು.  ಅವರ ಅಂಗಗಳು ಹೊಂದಿಕೆಯಾಗುವ ಆಧಾರಲ್ಲಿ ತುರ್ತಾಗಿ ಅಂಗಾಂಗ ಪಡೆಯಲು ಕಾಯುತ್ತಿದ್ದ ರೋಗಿಗಳಿಗೆ  ಆಕೆಯ ಅಂಗಾಂಗ ಒದಗಿಸಲು ತಜ್ಞವೈದ್ಯರ ವಿಶೇಷ ತಂಡವು  ಕ್ರಮ ವಹಿಸಿತು. 

ADVERTISEMENT

ಚೆನ್ನೈನ ಬಿಜಿಎಸ್ ಆಸ್ಪತ್ರೆಯ ರೋಗಿಯೊಬ್ಬರಿಗೆ ಆಕೆಯ ಶ್ವಾಸಕೋಶವನ್ನು, ಬೆಂಗಳೂರಿನ ನಾರಾಯಣ ಹೃದಯಾಲಯದ ರೋಗಿಯೊಬ್ಬರಿಗೆ ಹೃದಯವನ್ನು, ಬೆಂಗಳೂರಿನ ಆಸ್ಟರ್‌ ಆಸ್ಪತ್ರೆಯ ರೋಗಿಯೊಬ್ಬರಿಗೆ  ಪಿತ್ತಕೋಶವನ್ನು, ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವರೋಗಿಗಳಿಗೆ  ಮೂತ್ರ ಜನಕಾಂಗಗಳು ಹಾಗೂ ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಫಾದರ್ ಮುಲ್ಲರ್ಸ್‌ ರೋಟರಿ ಚರ್ಮದ ಬ್ಯಾಂಕ್‌ನಲ್ಲಿ ಆಕೆಯ ಚರ್ಮವನ್ನು ಸಂರಕ್ಷಿಸಿಡಲಾಗಿದೆ ಎಂದು ಫಾದರ್ ಮುಲ್ಲರ್‌ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಆಕೆಯ ಅಂಗಾಂಗವನ್ನು ವಿಮಾನ ನಿಲ್ದಾಣದ ಮೂಲಕ ಬೇರೆ ಬೇರೆ ಕಡೆಯ ಆಸ್ಪತ್ರೆಗಳಿಗೆ ರವಾನಿಸಲು, ಆಂಬುಲೆನ್ಸ್‌ನ ತಡೆರಹಿತ ಸಂಚಾರಕ್ಕೆ ವ್ಯವಸ್ಥೆಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.