ADVERTISEMENT

ಜ. 5ರಿಂದ 'ಬ್ರಾಂಡ್ ಮಂಗಳೂರು ರೋಹನ್ ಕಪ್-2024' ಕ್ರಿಕೆಟ್‌ ಪಂದ್ಯಾಟ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 5:15 IST
Last Updated 18 ಡಿಸೆಂಬರ್ 2023, 5:15 IST
ಕ್ರಿಕೆಟ್‌
ಕ್ರಿಕೆಟ್‌   

ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು  (ಕೆಯುಡಬ್ಲ್ಯುಜೆ)  ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ 2024ರ ಜ.5ರಿಂದ ಜ.7ರವರೆಗೆ  'ಬ್ರಾಂಡ್ ಮಂಗಳೂರು ರೋಹನ್ ಕಪ್ -2024' ಕ್ರಿಕೆಟ್‌ ಪಂದ್ಯಾಟವನ್ನು ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾಹಿತಿ ನೀಡಿದ ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು, ‘ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘಗಳ 25 ಕ್ಕೂ ಹೆಚ್ಚು ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿವೆ. ಜ.5ರಂದು ಸಂಜೆ 5.30ಕ್ಕೆ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಿಧಾನ ಸಭಾಧ್ಯಕ್ಷ ಯು.ಟಿ ಖಾದ‌ರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ನಳಿನ್ ಕುಮಾರ್ ಕಟೀಲ್‌ ಮತ್ತಿತರರು ಭಾಗವಹಿಸಲಿದ್ದಾರೆ. ಜ. 7ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕ್ರೀಡಾ ಸಚಿವ ನಾಗೇಂದ್ರ, ವಸತಿ ಸಚಿವ ಜಮೀರ್ ಅಹಮದ್ ಖಾನ್ ಭಾಗವಹಿಸುವರು’ ಎಂದು ತಿಳಿಸಿದರು. 

‘ಪೆವಿಲಿಯನ್‌ಗೆ ಹುತಾತ್ಮ ಯೋಧ ಕ್ಯಾ. ಎಂ.ವಿ. ಪ್ರಾಂಜಲ್‌ ಹೆಸರು ಇಡಲಿದ್ದೇವೆ. ಪ್ರತಿ ತಂಡದ 15 ಸದಸ್ಯರಿಗೆ ವಸತಿ ಸೌಕರ್ಯ ಒದಗಿಸಲಿದ್ದೇವೆ. ಸಂಘದ ವಾರ್ಷಿಕ ಮಹಾಸಭೆಯೂ ಇದೇ ಸಂದರ್ಭದಲ್ಲಿ ಈ ನಗರದಲ್ಲೇ ನಡೆಯಲಿದೆ’ ಎಂದರು.

ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ‘ಕ್ರಿಕೆಟ್‌ ಪಂದ್ಯಾಟಕ್ಕೆ ಇದುವರೆಗೆ 16 ಜಿಲ್ಲೆಗಳ ತಂಡಗಳು  ಹೆಸರು ನೋಂದಾಯಿಸಿವೆ. ಹೆಸರು ನೋಂದಾಯಿಸಲು ಇದೇ 20ರವರೆಗೆ ಕಾಲಾವಕಾಶ ಇದೆ. ಮಹಾರಾಷ್ಟ್ರ, ಕಾಸರಗೋಡು ತಂಡಗಳೂ ಭಾಗವಹಿಸಲಿವೆ’ ಎಂದರು.‌

‘ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಸಾಂಸ್ಕೃತಿಕ‌ ಮೆರವಣಿಗೆ ನಡೆಯಲಿದ್ದು, ಉತ್ತಮ ನಿರ್ವಹಣೆ ನೀಡುವ ತಂಡಕ್ಕೆ ಬಹುಮಾನವೂ ಇದೆ’ ಎಂದರು. 

ಪಿ.ಬಿ.ಹರೀಶ ರೈ, ರವೀಂದ್ರ ‌ಶೆಟ್ಟಿ, ರಾಮಕೃಷ್ಣ ಆರ್.,  ಜಗನ್ನಾಥ ಶೆಟ್ಟಿ ಬಾಳ, ಪುಷ್ಪರಾಜ್‌ ಬಿ.ಎನ್.‌ ಸುದ್ದಿಗೋಷ್ಠಿಯಲ್ಲಿದ್ದರು.‌  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.