ADVERTISEMENT

ಭಾವನಾತ್ಮಕ ಒಡನಾಟಕ್ಕೆ ಒಡನಾಟದ ಸೇತುವೆ

ಉಪ್ಪಿನಂಗಡಿ: ಸ್ವಾತಂತ್ಯ್ರ ಪೂರ್ವದ ಅಪೂರ್ವ ಪಳೆಯುಳಿಕೆ

ಸಿದ್ದಿಕ್ ನೀರಾಜೆ
Published 16 ಜೂನ್ 2024, 7:59 IST
Last Updated 16 ಜೂನ್ 2024, 7:59 IST
ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿಗೆ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿದ್ದ ಸೇತುವೆ
ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿಗೆ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿದ್ದ ಸೇತುವೆ   

ಉಪ್ಪಿನಂಗಡಿ: 1936ರ ಅ.10ರಂದು ಅಂದಿನ ಬ್ರಿಟಿಷ್‌ ಅಧಿಕಾರಿಗಳಿಂದ ಇಲ್ಲಿನ ಕುಮಾರಧಾರಾ ನದಿಗೆ ನಿರ್ಮಿಸಿ ಲೋಕಾರ್ಪಣೆಗೊಂಡ ಸೇತುವೆ ಈ ವರ್ಷದ ಅಕ್ಟೋಬರ್‌ಗೆ 88 ವರ್ಷ ಪೂರ್ಣಗೊಳಿಸಲಿದೆ. ಸ್ವಾತಂತ್ರ್ಯಪೂರ್ವದ ಅಪೂರ್ವ ಪಳೆಯುಳಿಕೆಯಾಗಿ ಉಳಿದಿರುವ ಈ ಸೇತುವೆ ಇದೀಗ ಭಾವನಾತ್ಮಕ ಒಡನಾಟಕ್ಕೆ ಕೊಂಡಿಯಾಗಿದೆ.

ಈ ಸೇತುವೆ ತನ್ನ ಬಾಳ್ವಿಕೆಯ ಅವಧಿ ಪೂರ್ಣಗೊಂಡರೂ ಬಳಕೆಯಲ್ಲಿದ್ದು, ಸೇತುವೆಯ ಎರಡೂ ಪಾರ್ಶ್ವಕ್ಕೆ ಅಳವಡಿಸಿದ ಕಬ್ಬಿಣದ ರಕ್ಷಣಾ ಕವಚ ಕಳವಾಗಿದೆ. ಉಳಿದಂತೆ ಸೇತುವೆ ಗಟ್ಟಿಮುಟ್ಟಾಗಿದೆ. ಮಂಗಳೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 48ರ ಸಂಪರ್ಕ ಕೊಂಡಿಯಾಗಿದ್ದು, ಬಳಿಕ ರಾಷ್ಟ್ರೀಯ ಹೆದ್ದಾರಿ 48, 75 ಆಗಿ ಬದಲಾವಣೆಗೊಂಡಿತು. ಅದರ ಪಕ್ಕದಲ್ಲೇ ದ್ವಿಪಥದ ಹೊಸ ಸೇತುವೆ ನಿರ್ಮಾಣಗೊಂಡ ಬಳಿಕ ಹೆದ್ದಾರಿ ಇಲಾಖೆ ಈ ಸೇತುವೆಯಲ್ಲಿ ವಾಹನ ಸಂಚಾರವನ್ನು ನಿಷೇಿಸಿತ್ತು. ಆದರೆ, ಉಪ್ಪಿನಂಗಡಿ ಮತ್ತು ನೆಕ್ಕಿಲಾಡಿ ಪೇಟೆಯ ಸಂಪರ್ಕ ಕೊಂಡಿಯಾಗಿ ಈ ಸೇತುವೆ ಇಂದಿಗೂ ಬಳಕೆಯಲ್ಲಿದೆ.

ನೇತ್ರಾವತಿ–ಕುಮಾರಧಾರಾ ನದಿಗಳ ಸಂಗಮ ಸ್ಥಳದ ಸಮೀದಲ್ಲೇ ಇರುವ ಈ ಸೇತುವೆಯ ಸ್ತಂಭಗಳಿಗೆ ಕಲ್ಲುಗಳನ್ನು ಬಳಸಲಾಗಿದೆ. ಸೇತುವೆಯ ಎರಡೂ ಪಾರ್ಶ್ವದಲ್ಲಿ ರಕ್ಷಣಾ ಕವಚಗಳನ್ನು ಕಬ್ಬಿಣದಿಂದ ನಿರ್ಮಿಸಲಾಗಿದೆ. ಈ ರಕ್ಷಣಾ ಕವಚದಲ್ಲಿ ಅಳವಡಿಸಿದ್ದ ಕಬ್ಬಿಣದ ಪೈಪ್‌ಗಳು ಕಳವಾಗಿದ್ದು, ಇದರಿಂದಾಗಿ ಸೇತುವೆಯ ಹಲವೆಡೆ ಅಪಾಯಕಾರಿ ಸ್ಥಿತಿ ಇದೆ. ಮಳೆ ನೀರು ಹರಿದು ಹೋಗುವಂತೆ ಅಳವಡಿಸಲಾದ ರಂಧ್ರಗಳು ಮುಚ್ಚಿದ್ದು, ಸೇತುವೆ ಮೇಲೆ ನೀರು ನಿಂತು ಸಂಚಾರಕ್ಕೆ ತೊಂದರೆ ಆಗುತ್ತಿದೆ.

ADVERTISEMENT

ಮುಂಜಾನೆಯ ನಡಿಗೆಗೂ ಈ ಸೇತುವೆ ಬಳಕೆಯಲ್ಲಿದ್ದು, ವಾಹನ ಸಂಚಾರ ಮಾತ್ರವಲ್ಲದೆ ಸಂಚಾರೇತರ ಉದ್ದೇಶಗಳಿಗೆ ಬಳಕೆಯಾಗುತ್ತಿರುವುದರಿಂದ ಭಾವನಾತ್ಮಕ ಒಡನಾಟದ ಸೇತುವೆಯಾಗಿಯೂ ಗಮನ ಸೆಳೆದಿದೆ.

ಸೇತುವೆಯ ನಿರ್ವಹಣೆ: ಇಲಾಖೆಯೇ ಮುಂದುವರಿಸಲಿ: ಅಂದಿನ ಕಾಲದಲ್ಲಿ ಗುಣಮಟ್ಟಕ್ಕೆ ಯಾವ ರೀತಿ ಒತ್ತು ನೀಡುತ್ತಿದ್ದರು ಎನ್ನುವುದಕ್ಕೆ ಈ ಸೇತುವೆಯೇ ಸಾಕ್ಷಿಯಾಗಿದೆ. ಈ ಸೇತುವೆ ಅಧಿಕೃತವಾಗಿ ಬಳಕೆಯಲ್ಲಿದ್ದಾಗ ಸೇತುವೆಯ ಕಬ್ಬಿಣಕ್ಕೆ ಕಾಲ ಕಾಲಕ್ಕೆ ಪೈಂಟಿಂಗ್ ಮಾಡಿ ತನ್ಮೂಲಕ ತುಕ್ಕು ಹಿಡಿಯದಂತೆ ನೋಡಿಕೊಳ್ಳಲಾಗುತ್ತಿತ್ತು. ಸೇತುವೆಯ ಬಳಕೆ ಅಧಿಕೃತವಾಗಿ ನಿಂತು ಹೋದ ಬಳಿಕ ಇದರ ನಿರ್ವಹಣೆಯೂ ನಿಂತು ಹೋಗಿದೆ. ಕಬ್ಬಿಣ ತುಕ್ಕು ಹಿಡಿಯಲಾರಂಭಿಸಿದೆ. ಹಲವು ಕಳ್ಳರ ವಶವಾಗಿದೆ. 88 ವರ್ಷಗಳ ಇತಿಹಾಸವನ್ನು ಕಂಡಿರುವ ಸೇತುವೆಯನ್ನು ಸುಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಸರ್ಕಾರಿ ವ್ಯವಸ್ಥೆಯ ಮತ್ತು ಸಮಾಜದ ಕರ್ತವ್ಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಶ್ರಫ್ ಬಸ್ತಿಕಾರ್ ತಿಳಿಸಿದ್ದಾರೆ.

16.10.1936ರಲ್ಲಿ ಲೋಕಾರ್ಪಣೆಗೊಂಡ ಸೇತುವೆ ಉಪ್ಪಿನಂಗಡಿ-ನೆಕ್ಕಿಲಾಡಿ ಪೇಟೆಯ ಸಂಪರ್ಕ ಕೊಂಡಿ ದ್ವಿಪಥದ ಹೊಸ ಸೇತುವೆ ನಿರ್ಮಾಣದ ಬಳಿಕ ವಾಹನ ನಿಷೇಧ ಆದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.