ಮಂಗಳೂರು: ಬಂಟ ಸಮಾಜದವರ ಜೊತೆ ಎಲ್ಲ ಸಮಾಜದ ದುರ್ಬಲರು, ಅಶಕ್ತರಿಗೆ ನೆರವು ನೀಡುವುದು ಸಂಘಟನೆಯ ಉದ್ದೇಶವಾಗಿದೆ. ₹1.50 ಕೋಟಿಯಷ್ಟು ಸಹಾಯಧನವನ್ನು ಸಂಘಟನೆಯಿಂದ ವಿತರಿಸಲಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ನಗರದ ಬಂಟ್ಸ್ ಹಾಸ್ಟೆಲ್‌ನ ಗೀತಾ ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಹಾಯಧನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಸಹಾಯಕರಾಗಿರುವ ಸಮಾಜದವರಿಗೆ ಆರ್ಥಿಕ ಸಹಾಯ, ವಸತಿ ನಿರ್ಮಾಣ, ಕೊರೊನಾ ಸೋಂಕಿತರು ಹಾಗೂ ಅಗತ್ಯವಿದ್ದವರಿಗೆ ವೈದ್ಯಕೀಯ ನೆರವು, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೆಣ್ಣುಮಕ್ಕಳ ವಿವಾಹಕ್ಕೆ ನೆರವು ಇತ್ಯಾದಿ ಸಹಾಯವನ್ನು ನೀಡಲಾಗಿದೆ. ಉಡುಪಿಯಲ್ಲಿ ₹80 ಲಕ್ಷ ವೌಲ್ಯದ ಸಹಾಯಧನವನ್ನು ಈಗಾಗಲೇ ವಿತರಿಸಲಾಗಿದೆ. ಮಂಗಳೂರಿನಲ್ಲಿ ₹70 ಲಕ್ಷ ಮೊತ್ತದ ಸಹಾಯಧನ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಬಂಟ ಸಮಾಜ ಸಂಘಟನೆಯ ಮೂಲಕ ಕಷ್ಟದಲ್ಲಿರುವವರಿಗೆ ನೆರವು ನೀಡುವುದು ಇತರರಿಗೆ ಮಾದರಿಯಾಗಿದೆ ಎಂದರು.
ಜಾಗತಿಕ ಬಂಟರ ಸಂಘದ ಒಕ್ಕೂಟದ ನಿರ್ದೇಶಕ ಕೆ.ಎಂ.ಶೆಟ್ಟಿ ಉದ್ಘಾಟಿಸಿದರು. ಮಾಜಿ ಸಚಿವರಾದ ಬಿ.ರಮಾನಾಥ ರೈ, ಕೆ.ಅಭಯಚಂದ್ರ ಜೈನ್ ಮಾತನಾಡಿದರು. ಶಾಸಕರಾದ ಯು.ಟಿ. ಖಾದರ್, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್ ವೇದಿಕೆಯಲ್ಲಿದ್ದರು.
ಸಾಧಕರಾದ ಲಿಂಗಪ್ಪ ಶೇರಿಗಾರ್ ಕಟೀಲು, ಗೋಪಾಲಕೃಷ್ಣ, ಡಾ.ಅಕ್ಷತಾ ವಿ. ರೈ, ಅಶೋಕ್ ಪಕ್ಕಳ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಮೈಮುನಾ ಫೌಂಡೇಶನ್‌ನ ನಿರ್ದೇಶಕ ಮುಹಮ್ಮದ್ ಆಸಿಫ್ ಸಾಣೂರು, ಕಲಾವಿದ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಗೌರವ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಸತೀಶ್ ಅಡಪ, ನಗ್ರಿಗುತ್ತು ವಿವೇಕ್ ಶೆಟ್ಟಿ ಭಾಗವಹಿಸಿದ್ದರು.
‘ಬಂಟರನ್ನು 2ಎಗೆ ಸೇರ್ಪಡೆ ಮಾಡಿ’
ಬಂಟ ಜಾತಿಯವರನ್ನು ಹಿಂದುಳಿದ ವರ್ಗ 3 ಬಿ ವರ್ಗದಲ್ಲಿದ್ದು, ಇದರಿಂದ ಬಂಟ ಸಮಾಜದ ಸಾಕಷ್ಟು ಬಡವರು ಮೀಸಲಾತಿಯ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಬಂಟರನ್ನು 2ಎ ವರ್ಗಕ್ಕೆ ಸೇರ್ಪಡೆ ಮಾಡುವಂತೆ ಸಂಸದರು, ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ನಳಿನ್‌ಕುಮಾರ್, ಸಂಘಟನೆಯ ಮನವಿಯ ಬಗ್ಗೆ ಸರ್ಕಾರದ ಹಂತದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.