ಮಂಗಳೂರು: ‘ರಾಜ್ಯ ಸರ್ಕಾರ ಬಂಟರ ನಿಗಮ ಸ್ಥಾಪಿಸುವ ಭರವಸೆ ಈಡೇರಿಸದೇ ಸಮುದಾಯಕ್ಕೆ ಮೋಸ ಬಗೆದಿದೆ. ಕನಿಷ್ಠಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಾದರೂ ಬಂಟರ ನಿಗಮ ಮತ್ತು ಬಂಟರ ಮೀಸಲಾತಿಗೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದು’ ಎಂದು ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಎಚ್ಚರಿಕೆ ನೀಡಿದರು.
‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟರ ಪ್ರತಿನಿಧಿಗಳಾಗಿ ಐವರು ಶಾಸಕರು ಇದ್ದಾರೆ. ಸಂಸದ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಬಂಟ ಸಮುದಾಯದವರು. ಇವರೆಲ್ಲರೂ ಬಂಟರ ಹೆಸರಿನಲ್ಲಿ ವೋಟು ಮತ್ತು ಇತರ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಆದರೆ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯದಲ್ಲಿ ಉದಾಸೀನ ಮಾಡಿದ್ದಾರೆ’ ಎಂದು ಹರೀಶ್ ಶೆಟ್ಟಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ನಿಗಮ ಸ್ಥಾಪನೆ ಮತ್ತು ಬಂಟರನ್ನು ‘3ಬಿ’ ಯಿಂದ ‘2ಎ’ಗೆ ವರ್ಗಾಯಿಸುವಂತೆ ನಳಿನ್ ಕುಮಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿತ್ತು. ಬಜೆಟ್‌ನಲ್ಲಿ ಈ ವಿಷಯ ಪ್ರಸ್ತಾಪ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ನಾವು ಬೀದಿಗೆ ಇಳಿದು ಹೋರಾಟ ಮಾಡುವುದಿಲ್ಲ. ಮೋಸ ಮಾಡಿದವರನ್ನು ಚುನಾವಣೆಯಲ್ಲಿ ಸೋಲಿಸುವೆವು’ ಎಂದರು.
‘ಬಂಟರ ನಿಗಮ ಸ್ಥಾಪನೆ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಬಿಜೆಪಿ ಇತರ ಸಮುದಾಯದವರಿಗೆ ನಿಗಮ ಸ್ಥಾಪನೆ ಮಾಡಲು ಒಪ್ಪಿಕೊಂಡಿರುವುದು ಸಂತೋಷದ ವಿಷಯ. ಆದರೆ ಬಂಟರ ವಿಷಯದಲ್ಲಿ ತಾರತಮ್ಯ ಮಾಡಿದ್ದು ಸರಿಯಲ್ಲ. ಸರ್ಕಾರದ ಈ ನಿಲುವಿಗೆ ಸಮಾಜದ ಜನಪ್ರತಿನಿಧಿ
ಗಳ ಉದಾಸೀನವೂ ಕಾರಣ’ ಎಂದು ಅವರು ದೂರಿದರು.
ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜಶೆಟ್ಟಿ, ಪಡುಬಿದ್ರಿ ಘಟಕದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಪುಣೆ ಘಟಕದ ಅಧ್ಯಕ್ಷ ಸಂತೋಷ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.