ADVERTISEMENT

ಕ್ರಿಪ್ಟೊ ಕರೆನ್ಸಿ ಹೆಸರಲ್ಲಿ ವಂಚನೆ: ₹ 1.06 ಕೋಟಿ ಕಳಕೊಂಡ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 29 ಮೇ 2024, 15:48 IST
Last Updated 29 ಮೇ 2024, 15:48 IST

ಮಂಗಳೂರು: ಕ್ರಿಪ‍್ಟೊ ಕರೆನ್ಸಿ ಮೂಲಕ ಲಾಭ ಗಳಿಸುವ ಆಸೆಗೆ ಬಲಿಬಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಇಚ್ಲಂಪಾಡಿಯ ಉದ್ಯಮಿ ಪಿ.ಜಿ.ಸಾಜಿ ₹1.06 ಕೋಟಿ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಸೆನ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ನಾನು ಬೆಂಗಳೂರಿನಲ್ಲಿ ಉದ್ದಿಮೆಯೊಂದನ್ನು ನಡೆಸುತ್ತಿದ್ದೇನೆ. 2023ರ ಜೂನ್‌ 25ರಂದು ನನ್ನ ಮೊಬೈಲ್‌ನ ಟೆಲಿಗ್ರಾಂ ಆ್ಯಪ್‌ಗೆ ಅವಕ ವಾಟಾನಬೆ ಎಂಬ ಹೆಸರಿನ ವ್ಯಕ್ತಿಯು ಕ್ರಿಪ್ಟೊ ಕರೆನ್ಸಿಗೆ ಹಣ ವರ್ಗಾಯಿಸಲು ಬಿನಾನ್ಸ್‌ ಆ್ಯಪ್‌ ಮತ್ತು ಡೆಫಿ ಆ್ಯಪ್‌ ಡೌನ್ಲೋಡ್ ಮಾಡುವಂತೆ ಹೇಳಿದರು. ಅದರಂತೆ ನಾನು ನನ್ನ ಐಫೋನ್‌ನ ಆ್ಯಪ್ ಸ್ಟೋರ್‌ನಿಂದ ಆ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿದ್ದೆ. ಆ ವ್ಯಕ್ತಿಯು ಟೆಲಿಗ್ರಾಂ ಆ್ಯಪ್‌ನಲ್ಲಿ ನೀಡಿದ ಸೂಚನೆಯಂತೆ ನನ್ನ ಮೊಬೈಲ್‌ ನಂಬರ್‌ ಮತ್ತು ಇಮೇಲ್ ಐಡಿಯನ್ನು ಬಳಸಿ ಆ ಎರಡೂ ಆ್ಯಪ್‌ಗಳಲ್ಲಿ ವ್ಯಾಲೆಟ್‌ ಅನ್ನು ರಚಿಸಿದೆ. ನಂತರ ಅಪರಿಚಿತ ವ್ಯಕ್ತಿಯೊಬ್ಬರು ಟ್ರೇಡಿಂಗ್‌ ಹಾಗೂ ಎಕ್ಸ್‌ಚೇಂಜ್‌ ನಡೆಸುವ ವೆಬ್‌ಸೈಟ್‌ ಮತ್ತು ಟೋಕನ್‌ ವಿಳಾಸವನ್ನು ಕಳುಹಿಸಿದ್ದರು. ಅದನ್ನು ಬಳಸಿ ನನ್ನ ಬ್ಯಾಂಕ್‌ ಖಾತೆಗಳಿಂದ ಹಂತ ಹಂತವಾಗಿ ₹ 1.06 ಕೋಟಿ ಹಣವನ್ನು ವರ್ಗಾವಣೆ ಮಾಡಿದ್ದೆ ಎಂದು ವಂಚನೆಗೆ ಒಳಗಾದ ಪಿ.ಜಿ. ಸಾಜಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸೆನ್ ಅಪರಾಧ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66 ಡಿ (ಅನ್ಯ ವ್ಯಕ್ತಿಯ ಗುರುತು ದುರ್ಬಳಕೆ ಮಾಡಿ ಕಂಪ್ಯೂಟರ್‌ ಅಥವಾ ಇತರ ಸಂವಹನ ಸಾಧನದ ಮೂಲಕ ವಂಚನೆ ನಡೆಸುವುದು) ಮತ್ತು ಸೆಕ್ಷನ್ 66 ಸಿ (ಅನ್ಯವ್ಯಕ್ತಿಯ ಡಿಜಿಟಲ್ ಸಿಗ್ನೇಚರ್‌/ ಪಾಸ್‌ವರ್ಡ್‌ ಅಥವಾ ಇತರ ವಿಶಿಷ್ಟ ಗುರುತಿನ ದುರ್ಬಳಕೆ) ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 420 ಮತ್ತು ಸೆಕ್ಷನ್‌ 417ರ (ವಂಚನೆ) ಅಡಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.