ಮಂಗಳೂರು: ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್, ಬಿಜೆಪಿ ಮುಖಂಡ ಪ್ರಮೋದ ಮಧ್ವರಾಜ್ ಜೊತೆಗಿದ್ದರು.
ನಾಮಪತ್ರ ಸಲ್ಲಿಕೆಗೆ ತೆರಳುವ ಪೂರ್ವದಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಕಿಶೋರ್ ಕುಮಾರ್, 'ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಇಂತಹ ಅವಕಾಶ ಸಿಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಪಕ್ಷಕ್ಕೆ ಕಪ್ಪುಚುಕ್ಕಿ ಬರದಂತೆ ಜವಾಬ್ದಾರಿ ನಿರ್ವಹಿಸುತ್ತೇನೆ' ಎಂದರು.
'ನನಗೆ ಟಿಕೆಟ್ ನೀಡುವ ಮೂಲಕ ಅತ್ಯಂತ ಸಣ್ಣ ಸಮುದಾಯವಾಗಿರುವ ಸವಿತಾ ಸಮಾಜಕ್ಕೆ ಬಿಜೆಪಿ ಮನ್ನಣೆ ನೀಡಿದೆ. ನನ್ನ ತಂದೆ ರಾಮಯ್ಯ ಭಂಡಾರಿ ಜನಸಂಘದಲ್ಲಿ ಕೆಲಸ ಮಾಡಿದವರು. ಚಿಕ್ಕಪ್ಪ ಸೇರಿದಂತೆ ಕುಟುಂಬದ ಅನೇಕರು ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದವರು' ಎಂದು ಹೇಳಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಎಲ್ಲ ಬಿಜೆಪಿ ಶಾಸಕರು ಹಾಜರಿದ್ದರು.
ನಾಮಪತ್ರ ಸಲ್ಲಿಕೆಗೆ ತೆರಳುವ ಪೂರ್ವದಲ್ಲಿ ಪಕ್ಷದ ಕಚೇರಿ ಎದುರು ಕಾರ್ಯಕರ್ತರು ಹಾರ ಹಾಕಿ ಅಭ್ಯರ್ಥಿಯನ್ನು ಅಭಿನಂದಿಸಿದರು. ಚೆಂಡೆ ವಾದ್ಯ, ಕಾರ್ಯಕರ್ತರ ಜಯಘೋಷ ಮೊಳಗಿದವು.
ನಂತರ ಇನ್ನೊವಾ ಗಾಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಿಶೋರ್ ಕುಮಾರ್, ಜಿಲ್ಲಾಧಿಕಾರಿಗೆ ಮುಲ್ಲೈ ಮುಗಿಲನ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಅ.21ಕ್ಕೆ ಚುನಾವಣೆ:
ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನ. ಅ21ರಂದು ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.