ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಕಬ್ಬಿಣದ ಸಲಾಕೆಯ ತಡೆಬೇಲಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ವೃದ್ಧೆಯೊಬ್ಬರು ಭಾನುವಾರ ಮುಂಜಾನೆ ಸ್ಥಳದಲ್ಲೇ ಮೃತಪಟ್ಟರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರು ಗಾಯಗೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕುಂಜತ್ತೂರು ನಿವಾಸಿ ಬಿ.ಫಾತಿಮಾ (85) ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.
ಫಾತಿಮಾ ಅವರು ತನ್ನ ಮಗ ಮೂಸ (50) ಮೊಮ್ಮಗ ಮಸ್ತಫಾ (24) ಜೊತೆ ಮಂಗಳೂರಿನ ಅಡ್ಡೂರಿಗೆ ಶನಿವಾರ ತೆರಳಿ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಊರಿಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
‘ಫಾತಿಮಾ ಆಮ್ನಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದರು. ಮೊಮ್ಮಗ ಮುಸ್ತಫಾ ಕಾರು ಚಲಾಯಿಸುತ್ತಿದ್ದರು. ಚಾಲಕ ನಿದ್ದೆ ಮಂಪರಿನಲ್ಲಿದ್ದರು. ಚಾಲನೆ ವೇಳೆ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ತಡೆಬೇಲಿಗೆ ಕಾರು ಢಿಕ್ಕಿ ಹೊಡೆದಿತ್ತು. ಅಪಘಾತದ ಬಗ್ಗೆ ವಾಹನ ಸವಾರರೊಬ್ಬರು ತಲಪಾಡಿಯಲ್ಲಿ ಗಸ್ತು ತಿರುಗುತ್ತಿದ್ದ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದರು‘ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಸಿಬ್ಬಂದಿಗಳಾದ ಮಹೇಶ್ ಆಚಾರ್ಯ ಮತ್ತು ವಿಠ್ಠಲ್ ದಾಸ್ ಅವರು ಕಬ್ಬಿಣದ ಸಲಾಕೆ ಎಡೆಯಲ್ಲಿ ಸಿಲುಕಿ ಛಿಧ್ರಗೊಂಡಿದ್ದ ಫಾತಿಮಾರನ್ನು ಹೊರಗೆಳೆದಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರನ್ನು ತಮ್ಮ ಇಲಾಖಾ ವಾಹನದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು.
ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.