ADVERTISEMENT

ಕೊಲ್ಯ: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ, ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 10:54 IST
Last Updated 5 ಮಾರ್ಚ್ 2024, 10:54 IST
<div class="paragraphs"><p>ಬೈಕಿಗೆ&nbsp;ಡಿಕ್ಕಿ ಹೊಡೆದ ಕಾರು</p></div>

ಬೈಕಿಗೆ ಡಿಕ್ಕಿ ಹೊಡೆದ ಕಾರು

   

ಉಳ್ಳಾಲ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ಕೊಲ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬ್ರಹ್ಮಶ್ರೀ ಮಂದಿರದ ಬಳಿ ಹಿಂಬದಿಯಿಂದ ಬಂದ ಥಾರ್ ವಾಹನವು ಡಿಕ್ಕಿ ಹೊಡೆದ ಪರಿಣಾಮ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದು, ಸವಾರ ಮೃತ ಪಟ್ಟಿದ್ದಾರೆ.

ಕೊಲ್ಯ ನಿವಾಸಿ ಸಂತೋಷ್ ಬೆಳ್ಚಾಡ ( 45) ಮೃತರು. ಬಾಳೆಹಣ್ಣು ವ್ಯಾಪಾರಿಯಾಗಿದ್ದ ಅವರು ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಥಾರ್ ವಾಹನದಲ್ಲಿದ್ದ ಯುವಕರು ಗಾಂಜಾ ನಶೆಯಲ್ಲಿದ್ದು, ಅವರ ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಿ ಸ್ಥಳೀಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳೂರು ಕಡೆಯಿಂದ ಬಂದ ಥಾರ್ ವಾಹನವನ್ನು ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದರು. ಆ ವಾಹನದ ಎದುರಿನಲ್ಲಿ ಮಾರುತಿ ಬಲೇನೊ ಕಾರು ಸಾಗುತ್ತಿತ್ತು. ಅದರಲ್ಲಿ ಧರ್ಮಸ್ಥಳದ ಕುಟುಂಬವೊಂದು ಕಾಞಂಗಾಡ್‌ಗೆ ಪ್ರಯಾಣಿಸುತ್ತಿತ್ತು. ಥಾರ್ ವಾಹನವು ಡಿಕ್ಕಿ ಹೊಡೆದ ಪರಿಣಾಮ ಕಾರಿನ‌ ಚಕ್ರ ಸ್ಪೋಟಿಸಿತ್ತು. ಆಯತಪ್ಪಿದ ಕಾರು ಎದುರಿನಲ್ಲಿ ಸಾಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿತ್ತು. ರಸ್ತೆ ವಿಭಜಕಕ್ಕೆ ಬೈಕ್ ಬಡಿದ ಪರಿಣಾಮ ಸವಾರ ಸಂತೋಷ್ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಮಧ್ಯೆ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.

ಸಂತೋಷ್ ಅವರಿಗೆ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.‌ ಕುಟುಂಬಕ್ಕೆ ಅವರೇ ಆಧಾರವಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ದುರ್ಘಟನೆಗೆ ಕೊಲ್ಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸ್ಥಳದಲ್ಲಿ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ. ಇದನ್ನು ತಡೆಯಲು ಪೊಲೀಸರು ಯಾವುದೇ ಕ್ರಮ ವಹಿಸುತ್ತಿಲ್ಲ. ಈ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

'ಥಾರ್ ವಾಹನದಲ್ಲಿದ್ದ ಮೂವರು ಯುವಕರು ನಶೆಯಲ್ಲಿದ್ದರಿಂದ ಈ ಅಪಘಾತ ಸಂಭವಿಸಿದೆ. ತಕ್ಷಣವೇ ಮೂವರನ್ನು ತಪಾಸಣೆಗೆ ಒಳಪಡಿಸಬೇಕು. ಮೃತರ ಯುವಕನ‌ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಸ್ಥಳೀಯ ನಿವಾಸಿ ಶೇಖರ್ ಕನೀರುತೋಟ ಒತ್ತಾಯಿಸಿದರು.

ಅ‍‍ಪಘಾತ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.