ಮಂಗಳೂರು: ‘ಸ್ಥಳೀಯ ಸಂಸ್ಥೆಗಳಿಂದ ವ್ಯಾಪಾರ ಪರವಾನಗಿ ಪಡೆದಿರುವ ಮತ್ತು ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಪ್ರಾಧಿಕಾರದಿಂದ ಪ್ರಮಾಣಪತ್ರ ಹೊಂದಿರುವವರಿಗೆ ಮಾತ್ರ ಸಭೆ, ಸಮಾರಂಭಗಳಲ್ಲಿ ಕೇಟರಿಂಗ್ ನಡೆಸಲು ಅವಕಾಶ ನೀಡಬೇಕು’ ಎಂದು ದಕ್ಷಿಣ ಕನ್ನಡ ಕೇಟರಿಂಗ್ ಮಾಲೀಕರ ಸಂಘ ಒತ್ತಾಯಿಸಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್, ‘ಆರು ವರ್ಷಗಳ ಹಿಂದೆ ಹುಟ್ಟುಹಾಕಿರುವ ದಕ್ಷಿಣ ಕನ್ನಡ ಕೇಟರಿಂಗ್ ಮಾಲೀಕರ ಸಂಘದಲ್ಲಿ 250ರಷ್ಟು ಸದಸ್ಯರು ಇದ್ದಾರೆ. ಸಂಘದಲ್ಲಿ ಸದಸ್ಯತ್ವ ಹೊಂದಿರುವವರು ಪ್ರತಿವರ್ಷ ವ್ಯಾಪಾರ ಪರವಾನಗಿ ನವೀಕರಿಸಿಕೊಂಡು, ₹20 ಸಾವಿರದಿಂದ ₹50 ಸಾವಿರದವರೆಗೆ ಶುಲ್ಕ ಪಾವತಿಸುತ್ತಾರೆ. ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಪ್ರಾಧಿಕಾರದ ಪ್ರಮಾಣಪತ್ರ ಪಡೆಯಲು ಸಹ ಶುಲ್ಕ ಪಾವತಿಸುತ್ತಾರೆ. ಗ್ರಾಹಕರಿಗೆ ಆಹಾರ ಪೂರೈಕೆಯಲ್ಲಿ ಗುಣಮಟ್ಟ, ಸ್ವಚ್ಛತೆ ಕಾಪಾಡುವಲ್ಲಿ ನಾವು ಬದ್ಧರಾಗಿದ್ದೇವೆ’ ಎಂದರು.
ಪರವಾನಗಿ ಪಡೆದು ಕೇಟರಿಂಗ್ ಉದ್ಯಮ ನಡೆಸುವವರಿಗೆ ಸ್ಥಳೀಯ ಆಡಳಿತ ನೀಡುವ ಸೌಲಭ್ಯಗಳನ್ನು, ಪರವಾನಗಿ ಇಲ್ಲದೆ, ಕೇಟರಿಂಗ್ ಉದ್ಯಮ ನಡೆಸುವವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸ್ಥಳೀಯ ಆಡಳಿತಕ್ಕೆ ಆರ್ಥಿಕ ನಷ್ಟವಾಗುತ್ತಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 500 ಹಾಗೂ ಜಿಲ್ಲೆಯಲ್ಲಿ ಅಂದಾಜು 2,000 ಮಂದಿ ಪರವಾನಗಿ ಇಲ್ಲದೆ ಕೇಟರಿಂಗ್ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ಪರವಾನಗಿ ಇಲ್ಲದ ಇಂತಹ ಅನಧಿಕೃತ ಕೇಟರಿಂಗ್ ವ್ಯವಸ್ಥೆಯನ್ನು ನಿರ್ಬಂಧಿಸಬೇಕು. ಪರವಾನಗಿ ಇದ್ದವರಿಗೆ ಮಾತ್ರ ಸಭೆ, ಸಮಾರಂಭಗಳಲ್ಲಿ ಕೇಟರಿಂಗ್‌ಗೆ ಅವಕಾಶ ಕಲ್ಪಿಸಬೇಕು. ಆಹಾರ ಸುರಕ್ಷತೆ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ ಎಂದು ಆಗ್ರಹಿಸಿದರು.
ಈ ಸಂಬಂಧ ಕ್ರಮ ವಹಿಸುವಂತೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
‘ನಮ್ಮ ಸಂಘದ ಸದಸ್ಯತ್ವ ಪಡೆಯಲು ವ್ಯಾಪಾರ ಪರವಾನಗಿ ಪಡೆಯುವುದು ಕಡ್ಡಾಯ. ಸಂಘವು ಆಹಾರ ಗುಣಮಟ್ಟ, ಸ್ವಚ್ಛತೆಗೆ ಒತ್ತು ನೀಡಿದ್ದು, ಯಾವುದೇ ದೂರು ಬಂದಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಿ, ಚರ್ಚಿಸುತ್ತದೆ. ಆಹಾರದ ರುಚಿ ಹೆಚ್ಚಿಸುವ ಟೇಸ್ಟಿಂಗ್ ಪೌಡರ್ ನಾವು ಬಳಸುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಸಂಘದ ಗೌರವಾಧ್ಯಕ್ಷ ಸುಧಾಕರ್ ಕಾಮತ್, ಪ್ರಮುಖರಾದ ರಾಜಗೋಪಾಲ ರೈ, ದೀಪಕ್ ಕೋಟ್ಯಾನ್, ರಾಜೇಶ್ ಕೊಂಚಾಡಿ, ನಾರಾಯಣ ಸುವರ್ಣ, ವಿಜಯಕುಮಾರ್, ಹನೀಶ್ ಶೇಕ್ ಮಹಮ್ಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.