ADVERTISEMENT

ದಕ್ಷಿಣ ಕನ್ನಡ: ಜಾನುವಾರು ಗಣತಿಗೆ ‘ಪಶು ಸಖಿ’ಯರ ಬಲ

ಸೆ.1ರಿಂದ ಡಿ.31ರವರೆಗೆ ನಡೆಯಲಿದೆ ಜಾನುವಾರು ಗಣತಿ

ಪ್ರವೀಣ್‌ ಕುಮಾರ್‌ ಪಿ.ವಿ
Published 22 ಆಗಸ್ಟ್ 2024, 5:47 IST
Last Updated 22 ಆಗಸ್ಟ್ 2024, 5:47 IST
   

ಮಂಗಳೂರು: ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಜಾನುವಾರು ಗಣತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಸಜ್ಜಾಗಿದೆ. ಸೆ.1ರಿಂದ ಡಿ.31ರವರೆಗೆ ಗಣತಿ ನಡೆಯಲಿದ್ದು, ಕಳೆದ ಸಾಲಿನಲ್ಲಿ ಇಲಾಖೆಗೆ ಸೇರ್ಪಡೆಯಾದ ‘ಪಶು ಸಖಿ’ಯರನ್ನೂ ಈ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ಗಣತಿ ಕಾರ್ಯಕ್ಕೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಅರುಣ್ ಕುಮಾರ್‌ ಶೆಟ್ಟಿ ಎನ್‌. ನೋಡಲ್‌ ಅಧಿಕಾರಿಯಾಗಿದ್ದಾರೆ.

‘ದೇಶದಲ್ಲಿ 1919ರಿಂದ ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಯುತ್ತಿದೆ. ಈ ಸಲದ್ದು 21ನೇ ಗಣತಿ. ಗಣತಿಗೆ ಈ ಹಿಂದೆ ಎರಡು ತಿಂಗಳು ಮಾತ್ರ ಕಾಲಾವಕಾಶ ನೀಡಲಾಗುತ್ತಿತ್ತು. ಈ ಸಲ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ. ಇದರಿಂದ ಗಣತಿಯ ಒತ್ತಡ ಕಡಿಮೆಯಾಗಿದೆ. ‘ಪಶು ಸಖಿ’ಯರ ಸೇವೆಯನ್ನು ಇದಕ್ಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದ್ದರಿಂದ ಗಣತಿ ಕಾರ್ಯಕ್ಕೆ ಸಿಬ್ಬಂದಿ ಕೊರತೆಯ ಸಮಸ್ಯೆ ನೀಗಿದೆ’ ಎಂದು ಡಾ.ಅರುಣ್ ಕುಮಾರ್‌ ಶೆಟ್ಟಿ ಎನ್‌. ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ನಗರ ಪ್ರದೇಶದಲ್ಲಿ ಒಬ್ಬ ಗಣತಿದಾರ 6000 ಮನೆಗಳನ್ನು ಹಾಗೂ ಗ್ರಾಮೀಣ ಪ್ರದೇಶದಲ್ಲಿ 4000 ಮನೆಗಳನ್ನು ಸಂದರ್ಶಿಸಿ ಜಾನುವಾರು ಗಣತಿ ನಡೆಸಬೇಕು. 2019ರ ಗಣತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದಾಜು 4.54 ಲಕ್ಷ ಮನೆಗಳಿದ್ದು, ಜಾನುವಾರು ಸಾಕುವ 68 ಸಾವಿರ ಕುಟುಂಬಗಳಿದ್ದವು. ಈಗ ಈ ಕುಟುಂಬಗಳ ಸಂಖ್ಯೆ 63 ಸಾವಿರಕ್ಕೆ ಇಳಿದಿರಬಹುದು ಎಂದು ಅಂದಾಜಿಸಲಾಗಿದೆ. ಜಾನುವಾರು ಸಾಕದವರ ಮನೆಗಳನ್ನೂ ಗಣತಿದಾರರು ಸಂದರ್ಶಿಸಿ ಮಾಹಿತಿ ಪಡೆಯಬೇಕು’ ಎಂದು ವಿವರಿಸಿದರು.

‘ದನ, ಎಮ್ಮೆ, ಕುರಿ, ಮೇಕೆ, ಹಂದಿ, ಮೊಲ, ನಾಯಿ, ಮೊದಲಾದ ಪ್ರಾಣಿಗಳನ್ನು ಹಾಗೂ ಕೋಳಿ, ಬಾತುಕೋಳಿ, ಟರ್ಕಿಕೋಳಿ ಮೊದಲಾದ ಕುಕ್ಕುಟಗಳನ್ನು ಗಣತಿ ಮಾಡಲಾಗುತ್ತದೆ. ಈ ಸಲ ಗಣತಿಗೆ ಜಿಲ್ಲೆಯಲ್ಲಿ ಒಟ್ಟು 215 ಗಣತಿದಾರರನ್ನು ಬಳಸಿಕೊಳ್ಳಲಾಗುತ್ತಿದೆ. ಅವರಲ್ಲಿ 100ಕ್ಕೂ ಹೆಚ್ಚು ಮಂದಿ ಪಶು ಸಖಿಯರು ಇದ್ದಾರೆ. ನಮ್ಮ ಇಲಾಖೆಯ ಡಿ ಗುಂಪಿನ ಸಿಬ್ಬಂದಿಯನ್ನೂ ಈ ಕಾರ್ಯಕ್ಕೆ ಬಳಸಲಿದ್ದೇವೆ’ ಎಂದು ವಿವರ ನೀಡಿದರು. 

ದ.ಕ: ಈ ಹಿಂದಿನ ಜಾನುವಾರು ಗಣತಿ ವಿವರ

‘ಗಣತಿ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಪ್ರತಿ ಐವರು ಗಣತಿದಾರರಿಗೆ ಒಬ್ಬರಂತೆ ಒಟ್ಟು 28 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪ್ರತಿ ಮನೆಯನ್ನು ಸಂದರ್ಶಿಸಿದ್ದಕ್ಕೆ ಗ್ರಾಮೀಣ ಗಣತಿದಾರರಿಗೆ ₹ 9 ಹಾಗೂ ನಗರ ಪ್ರದೇಶದಲ್ಲಿ ₹ 8 ಪ್ರೋತ್ಸಾಹ ಧನ ನೀಡಲಾಗುತ್ತದೆ. ಜಾನುವಾರು, ಅವುಗಳ ತಳಿ, ವರ್ಷ, ಮನೆಯವರ ಭೂಹಿಡುವಳಿ ವಿವರ, ಜಾನುವಾರು ಸಾಕುವವರ ಜಾತಿ, ವರ್ಗದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತದೆ. ದತ್ತಾಂಶ ವಿಶ್ಲೇಷಣೆಗೆ ಈ ಮಾಹಿತಿಯ ಅಗತ್ಯವಿದೆ’ ಎಂದು ತಿಳಿಸಿದರು.

ದೇಸಿ ತಳಿಯ ವಿವರ ಸಂಗ್ರಹ:

ಮಲೆನಾಡು ಗಿಡ್ಡ, ಅಮೃತ ಮಹಲ್‌, ಹಳ್ಳಿಕಾರ್‌ ಮೊದಲಾದ ದೇಸಿ ತಳಿಗಳ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ. ಗಣತಿದಾರರಿಗೆ ಜಾನುವಾರಿನ ತಳಿಯ ಬಗ್ಗೆ ಗೊಂದಲ ವಿದ್ದರೆ, ನ್ಯಾಷನಲ್ ಬೋರ್ಡ್‌ ಆಫ್ ಅನಿಮಲ್‌ ಜೆನೆಟಿಕ್ ರಿಸರ್ಚ್‌ ಪೋರ್ಟಲ್‌ ಮೂಲಕ ಅವುಗಳ ಲಕ್ಷಣಗಳನ್ನು ಖಾತರಿಪಡಿಸಿಕೊಳ್ಳಬಹುದು ಎಂದರು.

ಜಾನುವಾರು ಗಣತಿಗೆ ಬರುವ ಸಿಬ್ಬಂದಿ ಜೊತೆ ಸಾರ್ವಜನಿಕರು ಸಹಕರಿಸಬೇಕು. ಗಣತಿದಾರರು ಕೇಳುವ ಮಾಹಿತಿಯನ್ನು ಸಮರ್ಪಕವಾಗಿ ನೀಡಿ ಗಣತಿಯ ಯಶಸ್ಸಿಗೆ ಕೈಜೋಡಿಸಬೇಕು
ಡಾ.ಅರುಣ್‌ ಕುಮಾರ್‌ ಶೆಟ್ಟಿ ಎನ್‌. ಉಪನಿರ್ದೇಶಕರು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ, ದ.ಕ
‘ಗಣತಿಗೆ ಮೊಬೈಲ್ ಆ್ಯಪ್‌’
‘ಇಷ್ಟು ವರ್ಷ ಜಾನುವಾರು ಗಣತಿದಾರರು ಪುಸ್ತಕದಲ್ಲಿ ಅಂಕಿ ಅಂಶಗಳನ್ನು ಭರ್ತಿ ಮಾಡಬೇಕಿತ್ತು. ಈ ಪ್ರಕ್ರಿಯೆಗೆ ದೀರ್ಘ ಸಮಯ ತಗಲುತ್ತಿತ್ತು. ಸಲ ಗಣತಿಗಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿದೆ. ಮೊಬೈಲ್‌ ಆ್ಯಪ್‌ನಲ್ಲೇ ಗಣತಿದಾರರು ಮಾಹಿತಿ ಭರ್ತಿ ಮಾಡಲಿದ್ದು, ಅಂಕಿ–ಅಂಶ ವಿಶ್ಲೇಷಣೆಯೂ ಸುಲಭವಾಗಲಿದೆ’ ಎಂದು ಡಾ.ಅರುಣ್‌ ಕುಮಾರ್‌ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.