ADVERTISEMENT

ಸಿ.ಡಿ ಪ್ರಕರಣ | ರಮೇಶ್‌ ಜಾರಕಿಹೊಳಿ ಬಂಧಿಸಿ: ಮಿಥುನ್‌ ರೈ ಆಗ್ರಹ

ಇಂದಿನಿಂದ ಎಸ್‌ಐಟಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 7:57 IST
Last Updated 28 ಮಾರ್ಚ್ 2021, 7:57 IST
   

ಮಂಗಳೂರು: ಸಂತ್ರಸ್ತೆಯ ಪೋಷಕರು ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯು ಎಸ್‌ಐಟಿ ಪ್ರಾಯೋಜಕತ್ವದ್ದು. ಯುವತಿಗೆ ಅನ್ಯಾಯ ಮಾಡಿರುವ ಆರೋಪಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಬಂಧಿಸುವವರಿಗೆ ಎಸ್‌ಐಟಿ ತನಿಖಾ ಕಚೇರಿ ಎದುರು ಸೋಮವಾರದಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಿಡಿ ಪ್ರಕರಣದಲ್ಲಿ ಅನಗತ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಅವರ ಹೆಸರನ್ನು ತಳುಕು ಹಾಕುವ ಪ್ರಯತ್ನ ನಡೆಯುತ್ತಿದೆ. ಸಿಡಿಯಲ್ಲಿ ಇರುವ ಮಹಾನಾಯಕ ಯಾರು ಎಂಬುದು ಇಡೀ ದೇಶಕ್ಕೆ ಗೊತ್ತಾಗಿದೆ. ಪ್ರಕರಣದ ಹಾದಿ ತಪ್ಪಿಸುವ ಹುನ್ನಾರ ನಡೆಸುತ್ತಿರುವ ರಮೇಶ್ ಜಾರಕಿಹೊಳಿ ಅವರನ್ನು ಕೂಡಲೇ ಎಸ್‌ಐಟಿ ಬಂಧನ ಮಾಡಬೇಕು ಎಂದು ಒತ್ತಾಯಿಸಿದರು.

ಉಪ ಚುನಾವಣೆಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಂತ್ರಸ್ತೆ ಈಗಾಗಲೇ ಹೇಳಿಕೆ ನೀಡಿದ್ದು, ಪೋಷಕರು ರಮೇಶ್‌ ಜಾರಕಿಹೊಳಿ ಅವರ ಬಂಧನದಲ್ಲಿ ಇದ್ದಾರೆ, ಅವರನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇಲ್ಲಿ ಪೋಷಕರ ಹೇಳಿಕೆ ಮುಖ್ಯವಲ್ಲ; ಸಂತ್ರಸ್ತೆ ಯುವತಿ ಹೇಳಿಕೆ ಮುಖ್ಯವಾಗುತ್ತದೆ. ಸಂತ್ರಸ್ತೆಯ ಕುಟುಂಬದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್‌ ಆರೋಪ ಮಾಡಿದ್ದು, ಈ ಹೇಳಿಕೆಯ ಸ್ಕೀಪ್ಟ್‌ ಎಸ್‌ಐಟಿ ತನಿಖಾ ಅಧಿಕಾರಿಗಳದ್ದು ಎಂದು ಅವರು ಆರೋಪಿಸಿದರು.

ADVERTISEMENT

ಎಸ್‌ಐಟಿ ಅಧಿಕಾರಿಗಳೇ ಪೋಷಕರಿಂದ ಹೇಳಿಸಿದ್ದಾರೆ. ಆರೋಪಿ ಬಂಧನ ಮಾಡುವ ಬದಲು, ಪ್ರಕರಣದ ಹಾದಿ ತಪ್ಪಿಸುವ ಎಲ್ಲ ಆಯಾಮಗಳು ನಡೆಯುತ್ತಿವೆ. ರಮೇಶ್‌ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಅವರ ವಿರುದ್ಧ ಅವ್ಯಾಚ್ಚ ಶಬ್ದಗಳನ್ನು ಬಳಸಿರುವುದು ಅವರ ಸಂಸ್ಕೃತಿ ಹೇಳುತ್ತದೆ. ಕಾಂಗ್ರೆಸ್‌ ಪಕ್ಷಕ್ಕೆ ಅನ್ಯಾಯ ಮಾಡಿದ ಗಂಡಸು ಜಾರಕಿಹೊಳಿ, ಇದು ಅವರ ಗಂಡಸುತನ. ಇಂತಹ ಗಂಡಸುತನವನ್ನು ತೋರಿಸಿದ ಕೀರ್ತಿ ಅವರಿಗೆ ಸಲುತ್ತದೆ. ಅವರು ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಬಳಸಿದ ಪದ ಪ್ರಯೋಗವು ಅವರ ಸಂಸ್ಕೃತಿಯ ಪ್ರತೀಕ ಎಂದು ಆಕ್ರೋಶ ಹೊರ ಹಾಕಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿದೆ. ಇಂತಹ ಶಾಸಕರನ್ನು ಮೊದಲು ಹೊರ ಹಾಕಿ. ಇನ್ನು ಸ್ವ ಪಕ್ಷದವರೇ ಟ್ವಿಟ್‌ ಮೂಲಕ ರಮೇಶ್‌ ಜಾರಕಿಹೊಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಸ್‌ಐಟಿ ಕೂಡಲೇ ಆರೋಪಿತ ವ್ಯಕ್ತಿ ಜಾರಕಿಹೊಳಿ ಬಂಧನ ಆಗಲೇಬೇಕು. ಸಂತ್ರಸ್ತೆಗೆ ನ್ಯಾಧೀಶರ ಎದುರು ಹೇಳಿಕೆ ದಾಖಲಿಸಬೇಕು. ಬಿಜೆಪಿಯಿಂದ ಜಾರಕಿಹೊಳಿ ಅವರನ್ನು ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಮಿಥುನ್‌ ರೈ ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡರಾದ ಅನಿಲ್‌, ಅಶ್ರಫ್‌ ಬಜಾಲ್‌, ಪ್ರಕಾಶ್‌ ಸಾಲಿಯಾನ್‌ ಸಂತೋಷ ಶೆಟ್ಟಿ, ಸುರೇಂದ್ರ, ಕಿರಣ್‌, ಪ್ರವೀಣ್‌ ರೇಗೋ ಇದ್ದರು.

ಇಂತಹ ಶಾಸಕರು ಬಿಜೆಪಿಗೆ ಬೇಕೆ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಉಪ ಚುನಾವಣೆ ಪ್ರಚಾರಕ್ಕೆ ಬೆಳಗಾವಿಗೆ ಹೋಗುತ್ತಾರೆ. ಹಾಗೇನಾದರೂ ರಮೇಶ್‌ ಜಾರಕಿಹೊಳಿ ಅವರ ಗುಂಡಾಗಳು ತಡೆಯುವ ಪ್ರಯತ್ನಕ್ಕೆ ಮುಂದಾದಲ್ಲಿ ಕಾಂಗ್ರೆಸ್‌ ಅದನ್ನು ಸಮರ್ಥವಾಗಿ ಎದುರಿಸಲಿದೆ ಎಂದು ಮಿಥುನ್‌ ರೈ ತಿಳಿಸಿದರು.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಅಧಿಕಾರ ದುರಪಯೋಗ ಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಸರ್ಕಾರವನ್ನು ತೆಗೆದು ಹಾಕುವು ಬೆದರಿಕೆ ಕೂಡ ಹಾಕುವ ಹೇಳಿಕೆಗಳನ್ನು ಮಾಧ್ಯಮದ ಎದುರು ಹೇಳಿದ್ದಾರೆ. ಇಂತಹ ಶಾಸಕರು ಬಿಜೆಪಿಗೆ ಬೇಕೆ? ಸಂತ್ರಸ್ತೆ ತಮ್ಮ ಕುಟುಂಬಕ್ಕೆ ರಕ್ಷಣೆ ಬೇಕು ಎಂದು ಹೇಳಿಕೆ ನೀಡಿದ್ದಾರೆ. ಎಸ್‌ಐಟಿ ಮೇಲೆಯೇ ಅನುಮಾನ ಮೂಡುವಂತಹ ಬೆಳವಣಿಗೆ ನಡೆಯುತ್ತಿವೆ. ಸಿಡಿ ಪ್ರಕರಣದ ರೂವಾರಿ, ಮಹಾನಾಯಕ ರಮೇಶ್‌ ಜಾರಕಿಹೊಳಿ ಬಂಧನ ಕೂಡಲೇ ಆಗಬೇಕು ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.