ADVERTISEMENT

ಹನುಮಗಿರಿ | ಪಂಚಮುಖಿ ಆಂಜನೇಯನಿಗೆ ಬೆಳ್ಳಿ ಗದೆ ಸಮರ್ಪಿಸಿದ ಅಮಿತ್ ಶಾ

ಅಮರಗಿರಿ ಭಾರತ ಮಾತೆ ಮಂದಿರ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 10:50 IST
Last Updated 11 ಫೆಬ್ರುವರಿ 2023, 10:50 IST
ಅಮಿತ್ ಶಾ
ಅಮಿತ್ ಶಾ   

ಮಂಗಳೂರು: ಪುತ್ತೂರು ಸಮೀಪದ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಭಾರತ ಮಾತೆ, ವೀರ ಯೋಧರು, ಅನ್ನದಾತರನ್ನು ನೆನಪಿಸುವ ಹಾಗೂ ರಾಷ್ಟ್ರಪ್ರೇಮ ಉದ್ದೀಪನ ಗೊಳಿಸುವ ನಿಟ್ಟಿನಲ್ಲಿ ನಿರ್ಮಿಸಿರುವ ‘ಅಮರಗಿರಿ' ಭಾರತ ಮಾತೆ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಲೋಕಾರ್ಪಣೆ ಮಾಡಿದರು.

ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬೆಳ್ಳಿ ಗದೆಯನ್ನು ಸಮರ್ಪಿಸಿದರು. ನಂತರ ಪಕ್ಕದ ಅಮರಗಿರಿಗೆ ತೆರಳಿ ಭಾರತ ಮಾತೆ ಮಂದಿರ ಉದ್ಘಾಟಿಸಿದರು. ತಮ್ಮ ಭೇಟಿಯ ಸ್ಮರಣೆಗಾಗಿ ಸಂವಿಧಾನದ ಪ್ರತಿಯ ಮೇಲೆ ಹಸ್ತಾಕ್ಷರ ಹಾಕಿ ಅದನ್ನು ಕೊಡುಗೆಯಾಗಿ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ನಳಿನ್‌ಕುಮಾರ್‌ ಕಟೀಲ್‌, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಇದ್ದರು.

ADVERTISEMENT

₹ 3 ಕೋಟಿ ವೆಚ್ಚದಲ್ಲಿ ಅಮರಗಿರಿ ನಿರ್ಮಾಣ: ಧರ್ಮಶ್ರೀ ಪ್ರತಿಷ್ಠಾನ ಎರಡೂವರೆ ಎಕರೆ ಜಾಗದಲ್ಲಿ ಅಮರಗಿರಿಯ ನಿರ್ಮಾಣ ಆಗಿದ್ದು ₹ 3 ಕೋಟಿ ವೆಚ್ಚ ಮಾಡಲಾಗಿದೆ.

ದೇಶ ಪೂಜನಾ ಕಲ್ಪನೆಯ ಅಮರಗಿರಿಯ ಪ್ರವೇಶ ದ್ವಾರದ ಬಳಿ ಭಾರತಾಂಬೆಯ ಕೊಂಡಾಡುವ `ವಂದೇ ಮಾತರಂ' ಶಿಲಾ ಫಲಕ, ಫಲಕದ ಹಿಂದೆ ಯೋಧನ ಪ್ರತಿಮೆ, ಅಷ್ಟಭುಜಾಕಾರದ ಭಾರತ ಮಾತೆಯ ಮಂದಿರಕ್ಕೆ ತೆರಳುವ ಹಾದಿಯಲ್ಲಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದ ಯೋಧನ ಹಸ್ತ ಆಕಾರದ ಶಿಲ್ಪ ಇದೆ. ಮುಂದೆ ಸಾಗಿದರೆ ಭವ್ಯ ಭಾರತದ ರಕ್ಷಣಾ ವ್ಯವಸ್ಥೆ ನೆನಪಿಸುವ ಭೂ, ವಾಯು ಮತ್ತು ಜಲ ಸೇನೆಗಳ ಲಾಂಭನ ಹೊತ್ತ ‘ವೀರಕಂಭ' ಇದೆ.

ಮಂದಿರದ ಒಳಗೆ ಅಮೃತಶಿಲೆಯಲ್ಲಿ ನಿರ್ಮಿಸಿದ ಭಾರತಮಾತೆಯ ಆರಡಿ ಎತ್ತರದ ವಿಗ್ರಹ, ಭಾರತದ ಮಾತೆಯ ಎಡ ಮತ್ತು ಬಲ ಭಾಗಗಳಲ್ಲಿ ಮೂರಡಿ ಎತ್ತರದ ರೈತ ಮತ್ತು ಯೋಧರ ಜೈ ಜವಾನ್, ಜೈ ಕಿಸಾನ್ ಪ್ರತಿಮೆಗಳು, ಭಾರತಾಂಬೆಯ ಎದುರಿಗೆ ಯೋಧರ ಸಾಹಸ, ಸಾಧನೆ ಮತ್ತು ಬಲಿದಾನ ನೆನಪಿಸುವ ಅಮರ ಜವಾನ್ ಸ್ಮಾರಕ ಶಿಲೆ, ಮೇಲ್ಭಾಗದಲ್ಲಿ ಸಮೃದ್ಧ ಭಾರತವನ್ನು ಕಟ್ಟಿದ ದಾರ್ಶನಿಕರ, ವೀರ ಸೇನಾನಿಗಳ ತೈಲ ಶಿಲ್ಪಗಳಿವೆ. ಅವರಗಿರಿ ಆವರಣದಲ್ಲಿ ಯುದ್ಧಭೂಮಿಯ ಚಿತ್ತಾರಗಳಿವೆ. ಮಂದಿರದ ಮುಂಭಾಗ ಮತ್ತು ಹಿಂಭಾಗದಲ್ಲಿ ಯೋಧರ ಹುಮ್ಮಸ್ಸಿನ ಬಿಂಬ-ಪ್ರತಿಬಿಂಬಗಳಿದ್ದು, ದೇವತಾರಾಧನೆ, ರಾಷ್ಟ್ರಾರಾಧನೆ, ಕಲಾರಾಧನೆ, ನಿಸರ್ಗಾರಾಧನೆಗಳ ಮೂಲಕ ಭವ್ಯ ಭಾರತ ಕಟ್ಟುವ ಪ್ರಕ್ರಿಯೆಗಳಿಗೆ `ಅಮರಗಿರಿ' ವಿಶೇಷ ತಾಣವಾಗಿ ರೂಪುಗೊಂಡಿದೆ.

ಅಮರಗಿರಿ ಪ್ರತಿ ಶನಿವಾರ ಮತ್ತು ಭಾನುವಾರ ತೆರೆದಿರುತ್ತದೆ. ಶಾಲಾ ಮಕ್ಕಳು ಬರಲು ಇಚ್ಛಿಸಿ ಮೊದಲೇ ತಿಳಿಸಿದರೆ ಅವರಿಗೆ ಬೇಕಾದ ದಿನ ತೆರೆದಿಡಲಾಗುವುದು. ರಾತ್ರಿ ವೇಳೆ ವಿಶೇಷ ದೀಪಾಲಂಕಾರದ ವ್ಯವಸ್ಥೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.