ಮ೦ಗಳೂರು: 'ಹಿಂಸಾ ಮಾರ್ಗದಲ್ಲಿ ನಡೆಯುವುದು ನಮ್ಮ ರಾಜಕೀಯ ಸಂಸ್ಕೃತಿಯಲ್ಲ. ಹಾಗಂತ ನೆಹರೂ ಕಾಲದ ರಾಜಕೀಯ ಸಂಸ್ಕೃತಿಯೂ ನಮ್ಮದಲ್ಲ. ಯಾರಾದರೂ ಕಾಲು ಕೆರೆದು ನಮ್ಮ ಮೇಲೆ ಜಗಳಕ್ಕೆ ಬಂದರೆ ಅವರದ್ದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡುವ ಸರ್ಕಾರ ರಾಷ್ಟ್ರದಲ್ಲಿದೆ’ ಎಂದು ನಮೋ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ತಮ್ಮ ನೂತನ ಕೃತಿ ‘ಮೋದಿ ಫಾರಿನ್ ಟ್ರಿಪ್ಪು’ ಬಿಡುಗಡೆ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
‘ಸದ್ಯಕ್ಕೆ ಚೀನಾ ಏಷ್ಯಾ ಖಂಡದ ದೈತ್ಯ ಶಕ್ತಿ. ಏಷ್ಯಾದ ದೈತ್ಯ ರಾಷ್ಟ್ರವಾಗಿ ಭಾರತವನ್ನು ಬೆಳೆಸುವುದು ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ಗುರಿ. ಇದಕ್ಕಾಗಿ 2024ರ ಚುನಾವಣೆಯಲ್ಲಿ ಮತ್ತೆ ಪ್ರಧಾನಿಯನ್ನಾಗಿಸುವ ಸಂಕಲ್ಪ ಮಾಡಬೇಕಿದೆ’ ಎಂದರು.
‘ಮೋದಿಯವರು ಅಮೇರಿಕದ ಸಂಸತ್ತಿನಲ್ಲಿ ಎರಡು ಸಲ ಭಾಷಣ ಮಾಡಿದ ಏಕೈಕ ಭಾರತೀಯ ಪ್ರಧಾನಿ. ಮೋದಿಯವರ ವಿದೇಶ ಪ್ರವಾಸ ಕೈಗೊಂಡಾಗ ಅನಿವಾಸಿ ಭಾರತೀಯರು ಅವರ ಮಾತುಗಳಿಗಾಗಿ ಕಾಯುತ್ತಾರೆ. ಅಂತರಾಷ್ಟ್ರೀಯ ಕಂಪನಿಗಳು ದೇಶದಲ್ಲಿ ಬಂಡವಾಳ ಹೂಡಲು ಕಾತರಿಸುತ್ತಿವೆ. ಮನಮೋಹನ್ ಸಿಂಗ್ ಅವರಿಗೆ ಹೋಲಿಸಿದಾಗ ಮೋದಿಯವರು ಕಡಿಮೆ ಖರ್ಚಿನಲ್ಲಿ ಹೆಚ್ಚು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಹೆಚ್ಚು ದೇಶಗಳ ಒಪ್ಪಂದ ಮಾಡಿಕೊಳ್ಳುವ ಮೂಲಕ ದೇಶಕ್ಕೆ ಲಾಭ ಮಾಡಿಕೊಟ್ಟಿದ್ದಾರೆ’ ಎಂದರು.
ಬಂಗಾರಡ್ಕ ವಿಶ್ವೇಶ್ವರ ಭಟ್, ‘ಮೋದಿ ಅವರಿಗೆ ಜನರ ನಾಡಿಮಿಡಿತ ಗೊತ್ತಿದೆ. ಜನರ ಆಶೋತ್ತರಗಳ ಬಗ್ಗೆ ಅರಿವಿದೆ. ಆಂತರಿಕ ಭದ್ರತೆ, ವಿದೇಶಾಂಗ ನೀತಿ, ರಕ್ಷಣೆಯ ಸ್ಪಷ್ಟ ಕಲ್ಪನೆ ಇದೆ. ಹಿಂದಿನ ಪ್ರಧಾನಿಗಳ ವೈಫಲ್ಯಗಳು ಮೋದಿಯವರ ಕಾಲದಲ್ಲಿ ಪುನರಾವರ್ತನೆಯಾಗಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.