ADVERTISEMENT

 ಕುಕ್ಕೆಯಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ: 267 ಭಕ್ತರಿಂದ ಎಡೆಸ್ನಾನ ಸೇವೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಕುಕ್ಕೆ ದೇವಳದಲ್ಲಿ ಭಾನುವಾರ 267 ಭಕ್ತರು ಎಡೆಸ್ನಾನ ಸೇವೆ ಸಲ್ಲಿಸಿದರು
ಕುಕ್ಕೆ ದೇವಳದಲ್ಲಿ ಭಾನುವಾರ 267 ಭಕ್ತರು ಎಡೆಸ್ನಾನ ಸೇವೆ ಸಲ್ಲಿಸಿದರು   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸ್ಕಂದ ಪಂಚಮಿಯ ದಿನವಾದ ಭಾನುವಾರ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.

ಗೋವು ಆಹಾರ ಸೇವಿಸಿದ ಎಲೆಯ ಮೇಲೆ 267 ಭಕ್ತರು ಸ್ವಯಂಪ್ರೇರಿತರಾಗಿ ಉರುಳು ಸೇವೆ ನಡೆಸಿದರು.

ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತರ ಮಾರ್ಗದರ್ಶನದಂತೆ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತ 432 ಬಾಳೆ ಎಲೆ ಹಾಕಿ, ಅದರ ಮೇಲೆ ನೈವೇದ್ಯ ಬಡಿಸಲಾಯಿತು. ಬಳಿಕ ದೇವಳದ ಗೋವುಗಳು ಅನ್ನ ಪ್ರಸಾದವನ್ನು ತಿಂದವು.

ADVERTISEMENT

ದೇವಳದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ನಿಂತಿದ್ದ ಭಕ್ತರು ಹಸುಗಳು ತಿಂದ ಅನ್ನಪ್ರಸಾದದ ಮೇಲೆ ಉರುಳು ಸೇವೆ ಕೈಗೊಂಡರು. ಒಂದು ಸುತ್ತು ಪ್ರದಕ್ಷಿಣೆ ಬಳಿಕ ಭಕ್ತರು ನದಿಯಲ್ಲಿ ಸ್ನಾನ ಮಾಡಿ ದೇವರ ಪ್ರಸಾದ ಮತ್ತು ಭೋಜನ ಸ್ವೀಕರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ ವಿ. ಭಟ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಪಿಜಿಎಸ್ಎನ್ ಪ್ರಸಾದ್, ಪ್ರಸನ್ನ ದರ್ಬೆ, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.