ADVERTISEMENT

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಇಂದು ಷಷ್ಠಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 6:55 IST
Last Updated 18 ಡಿಸೆಂಬರ್ 2023, 6:55 IST
ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ
ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ   

ಸುಬ್ರಹ್ಮಣ್ಯ: ಪುಟ್ಟ ಹಳ್ಳಿಗಳ ಗೊಂಚಲಾಗಿರುವ ಸುಬ್ರಹ್ಮಣ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸೋಮವಾರ ಚಂಪಾಷಷ್ಠಿ ಮಹೋತ್ಸವ. ಕ್ಷೇತ್ರವು ಷಟ್ಮುಖನ ಆರಾಧನೆಯೊಂದಿಗೆ ನಾಗಾರಾಧನೆಗೂ ಪಾಮುಖ್ಯತೆ ಪಡೆದಿದೆ.

ವಾಸುಕಿಯು ನಾಗರೂಪದಿಂದ ಭಕ್ತರ ಇಷ್ಟಾರ್ಥ ನೆರವೇರಿಸಿ ಕಾಪಾಡುತ್ತಿದ್ದಾನೆ ಎನ್ನುವುದು ಭಕ್ತರ ನಂಬಿಕೆ. ಸರ್ಪದೋಷ ನಿವಾರಣೆಯ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಉತ್ಸಾಹ ಮನೆಮಾಡಿದೆ. ಮಾರ್ಗಶಿರ ಶುದ್ಧ ಷಷ್ಠಿಯನ್ನು ಚಂಪಾಷಷ್ಠಿ ಎಂದು ಕರೆಯಲಾಗುತ್ತದೆ. ಇದು ಸುಬ್ರಹ್ಮಣ್ಯನಿಗೆ ಪ್ರಿಯವಾದ ದಿನ.

ಈ ದಿನ ಕುಕ್ಕೆ ಕ್ಷೇತ್ರದಲ್ಲಿ ಸ್ವಾಮಿಯು ಸುಮುಹೂರ್ತದಲ್ಲಿ ಬ್ರಹ್ಮರಥಾರೋಹಣನಾಗುತ್ತಾನೆ. ಇದಕ್ಕಿಂತ ಮೊದಲು ಉಮಾಮಹೇಶ್ವರ ದೇವರು ಮತ್ತು ಸುಬ್ರಹ್ಮಣ್ಯ ದೇವರು ಒಂದೇ ಪಲ್ಲಕಿಯಲ್ಲಿ ಬಂದು, ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲೂ ವಿರಾಜಮಾನರಾಗುತ್ತಾರೆ. ಬ್ರಹ್ಮರಥಾರೋಹಣವಾದ ನಂತರ ಸುವರ್ಣವೃಷ್ಠಿಯಾಗುತ್ತದೆ. ಈ ಸಂದರ್ಭದಲ್ಲಿ ಗರುಡನು ಬಂದು ಮೂರು ಪ್ರದಕ್ಷಿಣೆ ಹಾರುತ್ತಾನೆ ಎಂಬ ನಂಬಿಕೆ ಇದೆ. ಮೊದಲಿಗೆ ಪಂಚಮಿ ರಥವನ್ನು ಎಳೆದರೆ ನಂತರ ಚಂಪಾಷಷ್ಠಿ ಬ್ರಹ್ಮರಥೋತ್ಸವವು ಜರುಗುತ್ತದೆ. ಭಕ್ತರು ತಮ್ಮ ಹರಕೆಯಂತೆ, ಕಾಳುಮೆಣಸು, ಹಣ, ಏಲಕ್ಕಿ, ದವಸಧಾನ್ಯಗಳನ್ನು ರಥಕ್ಕೆ ಎಸೆದು ಭಕ್ತಿ ಸಲ್ಲಿಸುತ್ತಾರೆ. ಹಲವರು ರಥವನ್ನು ಎಳೆಯುವ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ.

ADVERTISEMENT

ಆಶ್ಲೇಷ ಬಲಿ: ದೋಷಗಳ ಪರಿಹಾರಾರ್ಥ ಮತ್ತು ವಿವಾಹ, ಸಂತಾನ ಭಾಗ್ಯಕ್ಕಾಗಿ ಆಶ್ಲೇಷ ಬಲಿ ಪ್ರಧಾನವಾಗಿದೆ. ಸುಬ್ರಹ್ಮಣ್ಯನ ಜನ್ಮ ನಕ್ಷತ್ರ ಆಶ್ಲೇಷ ಈ ಕಾರ್ಯಕ್ಕೆ ವಿಶೇಷ. ಸರ್ಪ ಹತ್ಯಾದೋಷ, ಕಾಳ ಸರ್ಪದೋಷದಿಂದ ಬರುವ ಸಂತಾನ ಹೀನತೆ, ಚರ್ಮವ್ಯಾಧಿ, ಭೂಮಿ, ನೀರಿನ ಸಮಸ್ಯೆಗಳ ಪರಿಹಾರೋಪಾಯಕ್ಕಾಗಿ, ಇಷ್ಟಾರ್ಥ ಸಿದ್ಧಿಗಾಗಿ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಾರೆ.

ನಿತ್ಯ ಅನ್ನದಾಸೋಹ: ದೇವಳಕ್ಕೆ ಬರುವ ಭಕ್ತರಿಗೆ ಏಕಾದಶಿ ಮತ್ತು ಇತರ ಉಪವಾಸ ದಿನಗಳನ್ನು ಹೊರತು ಪಡಿಸಿ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಉಚಿತ ಭೋಜನ ವ್ಯವಸ್ಥೆ ಇದೆ.

ಉರುಳುಸೇವೆ: ಲಕ್ಷದೀಪೋತ್ಸವದಂದು ಚಂದ್ರಮಂಡಲೋತ್ಸವದ ಬಳಿಕ ಸುಬ್ರಹ್ಮಣ್ಯನಿಗೆ ಪ್ರೀಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸುತ್ತಾರೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠ ಸೇವೆಯಲ್ಲೊಂದಾದ ಇದನ್ನು ಸ್ವಯಂಸ್ಫೂರ್ತಿಯಿಂದ ಸಹಸ್ರಾರು ಭಕ್ತರು ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವದ ವರೆಗೆ ನೆರವೇರಿಸುತ್ತಾರೆ. ಹಲವಾರು ವರ್ಷಗಳಿಂದ ನಿರಂತರವಾಗಿ ಈ ಸೇವೆಯನ್ನು ಮಾಡುವ ಭಕ್ತರೂ ಇದ್ದಾರೆ.

ದೇವಳದ ಗಜರಾಣಿ ಯಶಸ್ವಿಯು ಜಾತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಉತ್ಸವದ ಸಂದರ್ಭದಲ್ಲಿ ದೇವರ ಎದುರು ಹಿಡಿಯುವ ಬಿರುದಾವಳಿಗಳು, ಕೇವಲ ಲಕ್ಷದೀಪ, ಚೌತಿ, ಪಂಚಮಿ, ಷಷ್ಠಿ ದಿನಗಳಲ್ಲಿ ಮಾತ್ರ ಹಿಡಿಯುವ ತಂಬಿಲಾಲ, ಬಟ್ಟೆಯ ನಿಶಾನಿ, ಮಕರತೋರಣ, ಸತ್ತಿಗೆ, ಓಲರಿಕೊಡೆ, ಬೆಳ್ಳಿಯ ಪಂಚ ದೀವಟಿಕೆಗಳು ದೇವರ ಉತ್ಸವಕ್ಕೆ ಮೆರುಗು ನೀಡಿದೆ.

ರಥಗಳದ್ದೇ ಜಾತ್ರೆ: ಕುಕ್ಕೆ ಸುಬ್ರಹ್ಮಣ್ಯದ ಜಾತ್ರಾ ವೈಭವಕ್ಕೆ ರಥಗಳೇ ಪ್ರಮುಖ. ಹಲವು ರಥಗಳ ಮೂಲಕ ದೇವರು ಭಕ್ತರಿಗೆ ದರ್ಶನ ನೀಡುವುದರಿಂದ ಇಲ್ಲಿ ರಥಗಳದ್ದೇ ಜಾತ್ರೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಎಳೆಯುವ ಪವಿತ್ರ ಬ್ರಹ್ಮರಥ, ಪಂಚಮಿ ರಥ, ಐದು ಕಲಶವನ್ನೊಳಗೊಂಡ ಚಂದ್ರಮಂಡಲ, ಹೂವಿನ ತೇರು ಮತ್ತು ಒಳಾಂಗಣದ ಬಂಡಿರಥಗಳು ಕ್ಷೇತ್ರದ ಜಾತ್ರೋತ್ಸವಕ್ಕೆ ಮೆರುಗು ನೀಡುತ್ತವೆ.

ದ್ವಾದಶಿಯಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಕೊನೆಗೊಳ್ಳುತ್ತದೆ.

ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ
ಬೀದಿ ಮಡೆಸ್ನಾನ
ಅವಭೃತೋತ್ಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.