ADVERTISEMENT

ಊರಿನ ಕೋಳಿಗೆ ಐನ್ನೂರು, ಫಾರಂ ಕೋಳಿಗೆ ಐವತ್ತು

ಜಿಲ್ಲೆಯಲ್ಲಿ ಪ್ರತಿನಿತ್ಯ 35 ಲಕ್ಷ ಕೆ.ಜಿ.ಗೂ ಹೆಚ್ಚು ವಹಿವಾಟು

ಹರ್ಷವರ್ಧನ ಪಿ.ಆರ್.
Published 10 ಮಾರ್ಚ್ 2020, 19:31 IST
Last Updated 10 ಮಾರ್ಚ್ 2020, 19:31 IST
ಕೋಳಿ ಮಾರುಕಟ್ಟೆಯ ಸಾಂದರ್ಭಿಕ ಚಿತ್ರ
ಕೋಳಿ ಮಾರುಕಟ್ಟೆಯ ಸಾಂದರ್ಭಿಕ ಚಿತ್ರ   

ಮಂಗಳೂರು: ಬಿಸಿಲು, ಕೊರೊನಾ ವೈರಸ್, ಹಕ್ಕಿಜ್ವರಗಳ ಬಾಧೆ ಹಾಗೂ ಧಾರ್ಮಿಕ ಆಚರಣೆಗಳು ಕುಕ್ಕುಟೋದ್ಯಮದ ಮೇಲೆ ವಿಚಿತ್ರ ಪರಿಣಾಮ ಬೀರಿದ್ದು, ಕೆ.ಜಿ. ಫಾರಂ (ಬಾಯ್ಲರ್) ಕೋಳಿ ಬೆಲೆ ಸುಮಾರು ₹50ಕ್ಕೆ ಕುಸಿದರೆ, ಊರಿನ ಕೋಳಿ ಬೆಲೆ ₹500ಕ್ಕೂ ಹೆಚ್ಚಾಗಿದೆ.

ಕೊರೊನಾ ವೈರಸ್‌ ಆತಂಕದ ಬಳಿಕ ಫಾರಂ ಕೋಳಿ ಬೆಲೆಯು ಕುಸಿಯುತ್ತಲೇ ಬಂದಿತ್ತು. ₹160ರಲ್ಲಿದ್ದ ಕೆ.ಜಿ.(ಜೀವಂತ) ದರವು ₹100ರ ಆಸುಪಾಸು ಬಂದಿತ್ತು. ಈಚೆಗೆ ಕೇರಳದ ಕೋಯಿಕ್ಕೋಡ್ ಹಾಗೂ ಸುತ್ತ ಹಕ್ಕಿಜ್ವರ ಪತ್ತೆಯಾದ ಬಳಿಕ ಇನ್ನಷ್ಟು ಕುಸಿದಿದ್ದು, ₹30ರಿಂದ ₹70ರ ತನಕ ಇದೆ.

ಈ ನಡುವೆ ಕೋಳಿ ಪ್ರಿಯರು ಊರಿನ (ನಾಟಿ) ಕೋಳಿಗೆ ಮೊರೆ ಹೋಗುತ್ತಿದ್ದಾರೆ. ಅಲ್ಲದೇ, ಕರಾವಳಿಯಲ್ಲಿ ಜಾತ್ರೆ, ದೈವ, ಕೋಲ, ಅಗೆಲು, ಹರಕೆಯ ಋತುವಿನ ಕಾರಣ ಊರಿನ ಕೋಳಿ ಕೆ.ಜಿ.ಗೆ ₹450ರಿಂದ ₹600 ತನಕ ಬೇಡಿಕೆ ಸೃಷ್ಟಿಯಾಗಿದೆ. ಇನ್ನು ಕಟ್ಟದ ಕೋಳಿ (ಅಂಕದ ಕೋಳಿ) ಬೆಲೆ ಗಗನಕುಸುಮವಾಗಿದೆ.

ADVERTISEMENT

‘ಹರಕೆ –ವಿಧಿವಿಧಾನಗಳಿಗೆ ಊರಿನ ಕೋಳಿಯೇ ಆಗಬೇಕು. ಬಿಸಿಲು, ವದಂತಿಗಳಿಂದಾಗಿ ಕೋಳಿ ಪ್ರಿಯರೂ ಆಹಾರಕ್ಕಾಗಿ ಊರಿನ ಕೋಳಿಗೆ ಮೊರೆ ಹೋಗುತ್ತಿದ್ದಾರೆ. ಇದರ ಪೂರೈಕೆಯೂ ಕಡಿಮೆಯಿದ್ದು, ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ವ್ಯಾಪಾರದಲ್ಲಿ ತೊಡಗಿರುವ ಶ್ರೀಕಾಂತ್ ಕದ್ರಿ.

‘ಕಪ್ಪು ದಿನಗಳಲ್ಲಿ ಬಹುತೇಕ ಕ್ರೈಸ್ತರು ವ್ರತಾಚರಣೆಯ ಕಾರಣ ಮಾಂಸಾಹಾರ ತ್ಯಜಿಸುತ್ತಾರೆ’ ಎಂದರು.

35 ಲಕ್ಷ ಕೆ.ಜಿ.ಗೂ ಹೆಚ್ಚು ವಹಿವಾಟು

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿನಿತ್ಯ ಸುಮಾರು 35 ಲಕ್ಷ ಕೆ.ಜಿ.ಗೂ ಹೆಚ್ಚು ಕೋಳಿ ಮಾರಾಟ ನಡೆಯುತ್ತದೆ. ಶೇ 70ರಷ್ಟು ವ್ಯಾಪಾರ ಕುಸಿದಿದೆ. ಸಾಕಾಣಿಕೆಯಲ್ಲಿ ಒಂದೂವರೆ ಸಾವಿರದಷ್ಟು ಮಂದಿ ಇದ್ದರೆ, ಸಾಗಾಟ, ವ್ಯಾಪಾರ ಸೇರಿದಂತೆ ಉದ್ಯಮದಲ್ಲಿ ಲಕ್ಷಕ್ಕೂ ಹೆಚ್ಚು ಜನ ತೊಡಗಿಸಿಕೊಂಡಿದ್ದಾರೆ. ಇನ್ನು ಕರಾವಳಿಯ ಪ್ರವಾಸ ಮತ್ತು ಹೋಟೆಲ್ ಉದ್ಯಮಕ್ಕೆ ‘ಕೋಳಿ–ಮೀನು’ ದೊಡ್ಡ ಆದಾಯ ಮೂಲವಾಗಿದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಕುಕ್ಕುಟೋದ್ಯಮ ಮಂಡಳದ ನಿರ್ದೇಶಕ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಗಳ ಅಧ್ಯಕ್ಷ ದಯಾನಂದ ಅಡ್ಯಾರ್.

‘ಒಂದು ಕೆ.ಜಿ. ಕೋಳಿ ಉತ್ಪಾದನೆಗೆ ಸುಮಾರು ₹90ರಿಂದ 95ರಷ್ಟು ಖರ್ಚು ಬೀಳುತ್ತಿದೆ. ದರ ಕುಸಿತದ ಕಾರಣ ತೀವ್ರ ನಷ್ಟವಾಗಿದೆ. ಕೋಳಿಯನ್ನು ಚೆನ್ನಾಗಿ ಬೇಯಿಸಿ ತಿಂದರೆ ಅಪಾಯವಿಲ್ಲ. ಕೇರಳದಲ್ಲಿ ಹಕ್ಕಿಜ್ವರ ಬಂದ ಬಗ್ಗೆಯೇ ಸಂಶಯ ಇದೆ’ ಎನ್ನುತ್ತಾರೆ ಅವರು.

‘ಜಿಲ್ಲೆಯಲ್ಲಿ ಕೋಳಿ ಉತ್ಪಾದನೆಯೇ ಕಡಿಮೆ ಇದೆ. ಹೊರಗಿನಿಂದಲೇ ಗರಿಷ್ಠ ಆಮದಾಗುತ್ತದೆ. ಇಂತಹ ಬೆಳವಣಿಗೆಯಿಂದ ಉದ್ಯಮವೇ ಸ್ಥಗಿತಗೊಳ್ಳುವ ಅಪಾಯವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕರಾವಳಿಯಲ್ಲಿ ಬೇಸಿಗೆಯಲ್ಲಿ ಕೋಳಿ ಸಾಕಾಣೆ ಮಾಡುವುದು ಬಹಳ ಕಷ್ಟ. ಈ ನಡುವೆ ಮಾರುಕಟ್ಟೆ ಕುಸಿತವು ಸಾಕಾಣಿಕೆದಾರರಿಗೆ ಸಾಕಷ್ಟು ಹೊಡೆತ ನೀಡಿದೆ’ ಎನ್ನುತ್ತಾರೆ ಸಾಕಾಣಿಕೆ ಮಾಡುವ ಮರೋಡಿ ನಾರಾಯಣ ಪೂಜಾರಿ.

ಐದು ಕಡೆಗಳಲ್ಲಿ ಚೆಕ್‌ಪೋಸ್ಟ್

‘ಸುಮಾರು 200 ಕಿ.ಮೀ. ದೂರದ ಕೋಯಿಕ್ಕೋಡ್ ವ್ಯಾಪ್ತಿಯಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ಅಲ್ಲಿ ನಿರ್ಮೂಲನಾ ಕಾರ್ಯ ನಡೆಯುತ್ತಿದೆ. ಈ ಕುರಿತ ಅಂತರರಾಜ್ಯ ಪಶುವೈದ್ಯಕೀಯ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದು, ಸದ್ಯ ನಮ್ಮ ಜಿಲ್ಲೆಯಲ್ಲಿ ಯಾವುದೇ ಆತಂಕ ಇಲ್ಲ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಸ್.ಜಯರಾಜ್ ತಿಳಿಸಿದರು.

‘ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಗಡಿ ಭಾಗದ ಐದು ಕಡೆಗಳಲ್ಲಿ ಅರಣ್ಯ, ಆರೋಗ್ಯ, ಪೊಲೀಸ್‌, ಕಂದಾಯ ಇಲಾಖೆ ಸಹಕಾರದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುವುದು. ಅಲ್ಲಿ ಕೋಳಿ, ಪಂಜರ, ಲಾರಿಗಳಿಗೆ ಔಷಧಿ ಸಿಂಪಡಣೆ ಹಾಗೂ ಶುಚಿತ್ವ ಕಾರ್ಯ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

‘2012ರ ಜಾನುವಾರು ಗಣತಿ ಆಧಾರದಲ್ಲಿ ಜಿಲ್ಲೆಯಲ್ಲಿ 17.21 ಲಕ್ಷ ಕೋಳಿಗಳಿವೆ. ಆದರೆ, ಉದ್ಯಮದ ಆಮದು–ರಫ್ತು ಬೇರೆಯೇ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೋಳಿ ರಕ್ತ ಸಂಗ್ರಹಣೆ, ಪರೀಕ್ಷೆ, ಶುಚಿತ್ವ, ಜಾಗೃತಿ ಕಾರ್ಯಗಳು ನಡೆಯುತ್ತಿವೆ’ ಎಂದು ಸಹಾಯಕ ನಿರ್ದೇಶಕ ಡಾ.ಗುರುಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.