ಸುಳ್ಯ (ದಕ್ಷಿಣ ಕನ್ನಡ): ಮಲೆನಾಡು ಗಿಡ್ಡ ತಳಿಯ ಹಸುಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಮನೆಯ ಹಟ್ಟಿ ಸೇರಿವೆ.
ಶಾಲಿನಿ ರಜನೀಶ್ ಅವರು ತಮ್ಮ ಮನೆಯಲ್ಲಿ ಮಲೆನಾಡು ಗಿಡ್ಡ ತಳಿಯ ಜಾನುವಾರು ಸಾಕಲು ನಿರ್ಧರಿಸಿದ್ದರು. ಜಿಲ್ಲೆಯ ಕೊಯಿಲ ಪಶುಪಾಲನಾ ಕೇಂದ್ರವನ್ನು ಸಂಪರ್ಕಿಸಿ ‘ಮಲೆನಾಡು ಗಿಡ್ಡ’ ತಳಿಯ ಬಗ್ಗೆ ವಿಚಾರಿಸಿದ್ದರು. ಆದರೆ, ಅಲ್ಲಿಂದ ರೈತರಿಗೆ ಮಾತ್ರ ಜಾನುವಾರುಗಳ ವಿತರಣೆ ಮಾಡಲು ಅವಕಾಶ ಇದೆ. ಹೀಗಾಗಿ ಅಲ್ಲಿಯ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಅವರು ರೈತ ಅಕ್ಷಯ ಆಳ್ವ ಅವರನ್ನು ಸಂಪರ್ಕಿಸಿದರು.
ಅಲೆಕ್ಕಾಡಿಗೆ ಭೇಟಿ ನೀಡಿದ ಅಧಿಕಾರಿಗಳು ‘ಹಂಸಿ’ ಎನ್ನುವ ಐದು ವರ್ಷದ ಗೋವು, ಅದರ ಕರು ಪಂಚಮಿ ಹಾಗೂ ಬಾಳುಗೋಡು ರಾಜಶೇಖರ ಭಟ್ ಎಂಬುವರಿಗೆ ಅಕ್ಷಯ ಆಳ್ವ ಅವರು ನೀಡಿದ್ದ ಎರಡೂವರೆ ವರ್ಷದ ಸ್ವರ್ಣಕಪಿಲೆ ಹಸು, ಕರು ಸೇರಿದಂತೆ ಎರಡು ಹಸು ಮತ್ತು ಎರಡು ಕರುಗಳನ್ನು ಗೊತ್ತುಪಡಿಸಿದರು. ಇವುಗಳನ್ನು ಶಾಲಿನಿ ರಜನೀಶ್ ಖರೀದಿಸಿದ್ದು, ಅವುಗಳನ್ನು ಪೂಜೆ ಸಲ್ಲಿಸಿ ತಮ್ಮ ಮನೆಗೆ ಬರಮಾಡಿಕೊಂಡರು.
ಮಲೆನಾಡು ಗಿಡ್ಡ ಗೋತಳಿ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ಸದಾಶಿವ ಭಟ್ ಮರಿಕೆ, ಪ್ರಸನ್ನ ಭಟ್ ಎಣ್ಮೂರು, ಕೊಯಿಲ ಪಶುಪಾಲನಾ ಕೇಂದ್ರದ ಉಪ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್, ಸುಳ್ಯ ತಾಲ್ಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು, ಪಶುವೈದ್ಯ ಡಾ.ಸೂರ್ಯನಾರಾಯಣ ಭಟ್, ಅಕ್ಷಯ ಆಳ್ವ ಅವರು ಗೋಪೂಜೆ ಸಂದರ್ಭದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.