ADVERTISEMENT

ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಿ: ರಾಯ್ ಕ್ಯಾಸ್ಟಲಿನೊ

​ಪ್ರಜಾವಾಣಿ ವಾರ್ತೆ
Published 19 ಮೇ 2024, 6:04 IST
Last Updated 19 ಮೇ 2024, 6:04 IST
ಚಿಣ್ಣರ ಕಲರವ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳು ‘ಜಂಗಲ್ ಬುಕ್’ ಕೃತಿಯನ್ನು ಆಧರಿಸಿದ ನಾಟಕ ಪ್ರದರ್ಶಿಸಿದರು
ಚಿಣ್ಣರ ಕಲರವ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳು ‘ಜಂಗಲ್ ಬುಕ್’ ಕೃತಿಯನ್ನು ಆಧರಿಸಿದ ನಾಟಕ ಪ್ರದರ್ಶಿಸಿದರು   

ಮಂಗಳೂರು: ‘ಭವಿಷ್ಯತ್ತಿನ ಹರಿಕಾರರಾದ  ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಿದರೆ ಮಾತ್ರವೇ ಸುಂದರ ಸಮಾಜದ ನಿರ್ಮಾಣ ಸಾಧ್ಯ’ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೊ ಅಭಿಪ್ರಾಯಪಟ್ಟರು.

ಚಿಣ್ಣರ ಚಾವಡಿ  ಹಾಗೂ ಸಂತ‌ ಮದರ್ ತೆರೇಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ಜೆಪ್ಪು ಸಂತ ಜೆರೋಸಾ ಶಾಲೆಯಲ್ಲಿ ಐದು ದಿನ ನಡೆದ ‘ಚಿಣ್ಣರ ಕಲರವ - 2024’ ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಮಾನವೀಯತೆಯನ್ನು ಎತ್ತಿ ಹಿಡಿಯುವುದೇ ನಮ್ಮೆಲ್ಲರ ‌‌‌‌ಗುರಿ ಆಗಬೇಕು.  ಅದಕ್ಕೆ ಜಾತಿ– ಧರ್ಮ ಯಾವತ್ತೂ ಅಡ್ಡಿಯಾಗಬಾರದು. ಪರಸ್ಪರರನ್ನು ಪ್ರೀತಿಸಿ ಬದುಕಿದರೆ ಮಾತ್ರವೇ ಶಾಂತಿಯುತ ಸಮಾಜವನ್ನು ಕಟ್ಟಬಹುದು’  ಎಂದರು.

ADVERTISEMENT

ಸಂತ ಜೆರೋಸಾ ಶಾಲೆಯ ಸಹ ಶಿಕ್ಷಕಿ ಸಿಸ್ಟರ್ ಎಲ್ಫ್ರೆಡ್ ವಿಲ್ಮಾ ಡಿಸೋಜ, ‘ಸಮಾಜದಲ್ಲಿ ಇಂದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ.  ಮಕ್ಕಳಿಗೆ ಮನೆಯ ಪರಿಸರದಲ್ಲಿ ಬೆರೆಯಲು ಬಂಧುಗಳ ಕೊರತೆ ಇದೆ. ಮಕ್ಕಳ ಏಕತಾನತೆಯನ್ನು ದೂರ ಮಾಡಿ, ವಿಶಾಲ ಗೆಳೆಯರ ಬಳಗವನ್ನು ಹೊಂದಲು ಇಂತಹ ಶಿಬಿರಗಳ ಅಗತ್ಯವಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಿಣ್ಣರ ಚಾವಡಿಯ ಸಂಚಾಲಕ ಸುನಿಲ್ ಕುಮಾರ್ ಬಜಾಲ್, ‘ನಮ್ಮ ಮಕ್ಕಳು ನಮಗೆ ಸೀಮಿತವಲ್ಲ; ಅವರು ಸಮಾಜದ ಆಸ್ತಿ. ಅವರ ಪ್ರತಿಭೆಗಳನ್ನು ಗುರುತಿಸಿ  ಪೋಷಿಸುವುದು ಸಮಾಜದ ಕರ್ತವ್ಯವೂ ಆಗಿದೆ’ ಎಂದರು.

ಶಿಬಿರಾರ್ಥಿಗಳ ಪೋಷಕರಾದ ಪ್ರವೀಣ್, ಜೆರಾಲ್ಡ್ ಡಿಸೋಜ, ವಿನಯ ಮಾತನಾಡಿದರು

 ಚಿಣ್ಣರ ಚಾವಡಿಯ ಸಹ ಸಂಚಾಲಕಿ ಅಸುಂತ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ಸಂತ ಜೆರೋಸಾ ಶಾಲೆಯ ಮುಖ್ಯಶಿಕ್ಷಕಿ ಅರ್ಪಿತಾ, ಫ್ಲೇವಿ ಕ್ರಾಸ್ತಾ ಅತ್ತಾವರ, ದಿಶಾ ರೀಟಾ ಡಿಸೋಜ, ಹೇಜೆಲ್ ರಾಡ್ರಿಗಸ್, ಮಹಮ್ಮದ್ ಇಕ್ಬಾಲ್ ಕುದ್ರೋಳಿ, ಶಿಬಿರದ ನಿರ್ದೇಶಕರಾದ ಪ್ರವೀಣ್ ವಿಸ್ಮಯ ಬಜಾಲ್ ಭಾಗವಹಿಸಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಶಿಬಿರಾರ್ಥಿಗಳನ್ನು ಅಭಿನಂದಿಸಲಾಯಿತು. 

ಮನೋಜ್ ವಾಮಂಜೂರು ಸ್ವಾಗತಿಸಿದರು. ಡಾಲ್ಫಿ ಡಿಸೋಜ ವಂದಿಸಿದರು. ಪೂರ್ವಿ ಶೆಟ್ಟಿ ಹಾಗೂ ಜತೆ ಕಾರ್ಯದರ್ಶಿ ಆಲ್ಡಿನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಮೂಕಾಭಿನಯ, ನೃತ್ಯ, ತಾಲೀಮು ಹಾಗೂ ‘ಜಂಗಲ್ ಬುಕ್’ ಕೃತಿಯನ್ನು ಆಧರಿಸಿದ ನಾಟಕವನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.