ADVERTISEMENT

ಬಾಲ್ಯದಲ್ಲಿ ಕೆರೆಗೆ ಬಿದ್ದಿದ್ದ ಪೇಜಾವರ ಶ್ರೀಗಳು: ಬದುಕಿಸಿದ ಚೋಮ, ಓಡಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 13:47 IST
Last Updated 29 ಡಿಸೆಂಬರ್ 2019, 13:47 IST
ವೆಂಕಟ್ರಾಮ (ಪೇಜಾವರ ಸ್ವಾಮಿ) ಕೆರೆಗೆ ಬಿದ್ದಾಗ ಮೇಲಕ್ಕೆ ಎತ್ತಿ ರಕ್ಷಿಸಿದ ಚೋಮ ಮುಗೇರರ ಪುತ್ರ ದಿವಂಗತ ಓಡಿ
ವೆಂಕಟ್ರಾಮ (ಪೇಜಾವರ ಸ್ವಾಮಿ) ಕೆರೆಗೆ ಬಿದ್ದಾಗ ಮೇಲಕ್ಕೆ ಎತ್ತಿ ರಕ್ಷಿಸಿದ ಚೋಮ ಮುಗೇರರ ಪುತ್ರ ದಿವಂಗತ ಓಡಿ   

ಉಪ್ಪಿನಂಗಡಿ: ವೆಂಕಟ್ರಾಮ (ಪೇಜಾವರ ಸ್ವಾಮಿ) ಪೂರ್ವಾಶ್ರಮದ 5ನೇ ವಯಸ್ಸಿನಲ್ಲಿ ಕೆರೆಗೆ ಬಿದ್ದಿದ್ದು, ಮನೆಯ ಕೆಲಸದ ಆಳುಗಳಾಗಿದ್ದ ಚೋಮ ಮತ್ತು ಓಡಿ ಅವರು ಕೂಗಿ ಕರೆದ ಕಾರಣ, ಅವರನ್ನು ರಕ್ಷಿಸಲಾಗಿತ್ತು.

ಘಟನೆ: ಅದೊಂದು ದಿನ ವೆಂಕಟ್ರಾಮ ತನ್ನ ಎರಟಾಡಿಯಲ್ಲಿರವ ಮನೆ ಅಂಗಳದಲ್ಲಿ ಆಟವಾಡುತ್ತಿದ್ದರು. ಸನಿಹದ ತೋಟದ ಬದಿಯಲ್ಲಿ ಕೆರೆ ಇತ್ತು. ಹೀಗೆ ಓಡಾಡಿಕೊಂಡು ಆಟವಾಡುತ್ತಲೇ, ವೆಂಕಟ್ರಾಮ ಕೆರೆಗೆ ಬಿದ್ದು ಬಿಟ್ಟರು.

ಇದನ್ನು ಎರಟಾಡಿ ಮನೆಯ ಕೆಲಸದ ಆಳುಗಳಾದ ಚೋಮ ಮುಗೇರ ಹಾಗೂ ಅವರ ಮಗ ಓಡಿ ಗಮನಿಸಿದ್ದರು. ಘಟನೆ ನೋಡುತ್ತಲೇ ಓಡಿ ಬೊಬ್ಬೆ ಹೊಡೆಯಲು ಆರಂಭಿಸಿದ್ದರು. ಆದರೆ, ಆಗ ಅಸ್ಪೃಶ್ಯತೆ ಕಟ್ಟುನಿಟ್ಟಾಗಿತ್ತು. ಹೀಗಾಗಿ ಕೆರೆ ಬಳಿ ಹೋದ ಅವರಿಬ್ಬರೂ ನೀರಿಗೆ ಬಿದ್ದ ಬ್ರಾಹ್ಮಣ ಹುಡುಗನನ್ನು ಮುಟ್ಟಿ ತೆಗೆದರೆ, ಸಮಸ್ಯೆಯಾಗಬಹುದೋ ಎಂದು ಆತಂಕಗೊಂಡಿದ್ದರು.

ADVERTISEMENT

ಅಂತಹ ಕಟು ಅಸ್ಪೃಶ್ಯತೆಯ ನಡುವೆಯೂ ಬಾಲಕ (ಸ್ವಾಮೀಜಿ) ಕಾಪಾಡಲು ಪಣ ತೊಟ್ಟ ಅವರಿಬ್ಬರೂ, ಬೊಬ್ಬೆ ಹಾಕುತ್ತಲೇ ಮನೆ ಬಳಿಕ ಓಡಿಹೋದರು. ಅದೃಷ್ಟವಶಾತ್, ಪೇಜಾವರ ಶ್ರೀಗಳ ತಂದೆ ನಾರಾಯಣ ಆಚಾರ್ಯರು ಮನೆಯಲ್ಲಿದ್ದರು. ಅವರು ಒಪ್ಪಿಗೆ ನೀಡಿದ ತಕ್ಷಣವೇ ಓಡೋಡಿ ಬಂದ ಚೋಮ ಮತ್ತು ಓಡಿ ಕೆರೆಗೆ ಧುಮುಕಿದರು. ಅಷ್ಟರಲ್ಲಾಗಲೇ ಬಾಲಕ ವೆಂಕಟ್ರಾಮ ನೀರಲ್ಲಿ ಮುಳುಗಿ, ಎದ್ದು, ಮತ್ತೆ ಮುಳುಗಿ ಆಗಿತ್ತು. ಇವರಿಬ್ಬರೂ ಬಾಲಕನನ್ನು ಎತ್ತಿ ಮೇಲಕ್ಕೆ ತಂದರು.

ಸಕಾಲದಲ್ಲಿ ಚೋಮ ಮತ್ತು ಓಡಿ ರಕ್ಷಿಸದೇ ಇದ್ದಿದ್ದರೆ ಕಥೆಯೇ ಬೇರೆ ಆಗಿರುತ್ತಿತ್ತು ಎಂದು ಪೇಜಾವರ ಶ್ರೀಗಳು ಈ ಘಟನೆಯನ್ನು ಸದಾ ಸ್ಮರಿಸಿಕೊಳ್ಳುತ್ತಿದ್ದರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.