ADVERTISEMENT

ಮಂಗಳೂರು: ಸಿಐಟಿಯು ನೇತೃತ್ವದಲ್ಲಿ ‘ಸಂಸದರ ಕಚೇರಿ ಚಲೊ’

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 14:12 IST
Last Updated 25 ಜನವರಿ 2024, 14:12 IST
   

ಮಂಗಳೂರು: ‘ಕೇಂದ್ರ ಸರ್ಕಾರವು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಟ್ಟು ಜನಪರ ನೀತಿ ಜಾರಿಗೊಳಿಸಬೇಕು, ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು’ ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಿಐಟಿಯು ಹಮ್ಮಿಕೊಂಡಿರುವ ‘ಸಂಸದರ ಕಚೇರಿ ಚಲೊ’ ಚಳವಳಿಯ ಭಾಗವಾಗಿ ಗುರುವಾರ ಕ್ಲಾಕ್‌ ಟವರ್‌ ಬಳಿ ಪ್ರತಿಭಟನೆ ನಡೆಸಲಾಯಿತು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ‘ಹತ್ತು ವರ್ಷಗಳಿಂದ ದೇಶವನ್ನಾಳುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿ ಕಾಪಾಡುವ ಮೂಲಕ ದೇಶದ ಜನರ ಬದುಕನ್ನು ಸರ್ವನಾಶಗೊಳಿಸಿದೆ. ಕಾರ್ಮಿಕ ಕಾನೂನುಗಳನ್ನು ಮಾಲಕ ವರ್ಗಕ್ಕೆ ಲಾಭ ತರುವ ರೀತಿ ತಿದ್ದುಪಡಿ ಮಾಡಿದೆ. ದುಡಿಯುವ ವರ್ಗಕ್ಕೆ ಕನಿಷ್ಠ ಕೂಲಿಯೂ ಸಿಗದೆ ಬದುಕು ಕಷ್ಟವಾಗುತ್ತಿದೆ’ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ಅಧಿಕಾರಕ್ಕೆ ಬಂದ ಯಾವ ಸರ್ಕಾರವೂ ಕಾರ್ಮಿಕ ವರ್ಗದ ಪರವಾಗಿ ಶ್ರಮಿಸುತ್ತಿಲ್ಲ. ಬದಲಾಗಿ ಮಾಲಕರ ಹಾಗೂ ಕಾರ್ಪೊರೇಟ್ ಕಂಪನಿಗಳ ಪರವಾಗಿ ನಿಂತು ಕಾರ್ಮಿಕರ ವಿರುದ್ದವೇ ದಬ್ಬಾಳಿಕೆ ನಡೆಸುತ್ತದೆ’ ಎಂದು ಟೀಕಿಸಿದರು.

ADVERTISEMENT

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಸುಕುಮಾರ್ ತೊಕ್ಕೋಟು, ರಾಧಾ ಮೂಡುಬಿದಿರೆ, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ಜಯಂತ ನಾಯಕ್, ರೋಹಿದಾಸ್, ವಸಂತಿ ಕುಪ್ಪೆಪದವು, ಗಿರಿಜಾ ಮೂಡುಬಿದಿರೆ, ಜನಾರ್ದನ ಕುತ್ತಾರ್, ಭಾರತಿ ಬೋಳಾರ, ಜಯಲಕ್ಷ್ಮಿ, ಲೋಲಾಕ್ಷಿ, ಪುಷ್ಪಾ, ವಾರಿಜಾ, ಲಕ್ಷ್ಮಿ, ಜಯಶ್ರೀ ಬೆಳ್ತಂಗಡಿ, ಮುಸ್ತಾಫ, ಆಸಿಫ್, ಅಹಮ್ಮದ್ ಭಾವ ಮುಂತಾದವರು ಇದ್ದರು.

ಬಳಿಕ ಸಿಐಟಿಯು ಪ್ರತಿನಿಧಿಗಳು ಸಂಸದ ನಳೀನ್ ಕುಮಾರ್ ಕಟೀಲ್ ಅವರ ಕಚೇರಿಗೆ ಹೋಗಿ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.