ಮಂಗಳೂರು: ‘ಕರಾವಳಿ ರಕ್ಷಣೆ ತರಬೇತಿ ಅಕಾಡೆಮಿ ಸ್ಥಾಪನೆಗೆ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ರಾಜ್ಯ ಸರ್ಕಾರವು ಕೆಂಜೂರು ಗ್ರಾಮದಲ್ಲಿ 159 ಎಕರೆ ಜಮೀನನ್ನು ಹಸ್ತಾಂತರಿಸಿದೆ. ಅಕಾಡೆಮಿಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ’ ಎಂದು ಕರಾವಳಿ ರಕ್ಷಣಾ ಪಡೆಯ ಪಶ್ಚಿಮ ವಲಯದ ಕಮಾಂಡರ್ ಆಗಿರುವ ಇನ್‌ಸ್ಪೆಕ್ಟರ್ ಜನರಲ್ ಎಂ.ವಿ.ಬಾಡ್ಕರ್ ತಿಳಿಸಿದರು.
ಕರಾವಳಿ ರಕ್ಷಣಾ ಪಡೆಯ ಪಶ್ಚಿಮ ವಲಯದ ಕಮಾಂಡರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಲ ಮಂಗಳೂರಿನ ಕಚೇರಿಗೆ ಶನಿವಾರ ಭೇಟಿ ನೀಡಿದ ಅವರು ವರಾಹ ನೌಕೆಯಲ್ಲಿ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿ, ಬಳಿಕ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದರು. ಕರಾವಳಿ ರಕ್ಷಣಾ ಪಡೆಯ ಸನ್ನದ್ಧತೆ, ಮಂಗಳೂರಿನ ವ್ಯಾಪ್ತಿಯಲ್ಲಿ ಆಗಬೇಕಾದ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆಯೂ ಅವರು ಪರಿಶೀಲನೆ ನಡೆಸಿದರು.
‘ಒಂದೆರಡು ವರ್ಷಗಳ ಒಳಗೆ ಕರಾವಳಿ ರಕ್ಷಣಾ ಪಡೆಯು ಸಿಬ್ಬಂದಿಯ ತರಬೇತಿಗೆಸ್ವಂತ ಅಕಾಡೆಮಿಯನ್ನು ಹೊಂದಬೇಕು ಎಂಬ ಆಶಯವ ನಮ್ಮದು. ತರಬೇತಿ ಅಕಾಡೆಮಿಯ ಡಿಪಿಆರ್ ಸಿದ್ಧವಾಗದೇ ಅದು ಯಾವಾಗ ಸ್ಥಾಪನೆ ಆಗಲಿದೆ ಎಂಬುದನ್ನು ಖಚಿತವಾಗಿ ಹೇಳಲಾಗದು’ ಎಂದು ಬಾಡ್ಕರ್ ತಿಳಿಸಿದರು.
‘ನಮ್ಮ ಸಿಬ್ಬಂದಿಗೆ ಸದ್ಯ ನೌಕಾ ಅಕಾಡೆಮಿಯಲ್ಲೇ ಮೂಲ ತರಬೇತಿಯನ್ನು ಒದಗಿಸಲಾಗುತ್ತಿದೆ. ಕೆಲವೊಂದು ವಿಶೇಷ ತರಬೇತಿಗಾಗಿ ವಿದೇಶಗಳಿಗೆ ತೆರಳಬೇಕಾದ ಅನಿವಾರ್ಯ ಇದೆ. ಸುಸಜ್ಜಿತ ಸೌಕರ್ಯಗಳನ್ನು ಹೊಂದಲಿರುವ ಹೊಸ ಅಕಾಡೆಮಿಯು ದೇಶದ ಕರಾವಳಿ ರಕ್ಷಣೆಯ ಸವಾಲುಗಳಿಗೆ ಅನುಗುಣವಾಗಿ ತರಬೇತಿಯನ್ನು ವಿನ್ಯಾಸಗೊಳಿಸಲು ಸಹಾಯಕ. ಸಿಬ್ಬಂದಿಯು ಕೆಲವೊಂದು ನಿರ್ದಿಷ್ಟ ವಿಚಾರಗಳಲ್ಲಿ ವಿಶೇಷ ಪರಿಣತಿ ಪಡೆಯುವುದಕ್ಕೂ ಇದು ನೆರವಾಗಲಿದೆ’ ಎಂದರು.
‘ಈಚಿನ ವರ್ಷಗಳಲ್ಲಿ ಭಾರತೀಯ ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಸಂಚಾರ ಹೆಚ್ಚಿದ್ದು, ಕರಾವಳಿ ರಕ್ಷಣಾ ಪಡೆಯ ಸವಾಲುಗಳೂ ಹೆಚ್ಚಿವೆ. ತಂತ್ರಜ್ಞಾನಗಳಲ್ಲಿ ಆಗಿರುವ ಬೆಳವಣಿಗೆಗಳನ್ನೂ ಅಳವಡಿಸಿಕೊಳ್ಳಬೇಕಾಗಿದೆ. ಮೀನುಗಾರರ ಭದ್ರತೆ ಹಾಗೂ ಸುರಕ್ಷತೆಗು ಆದ್ಯತೆ ನೀಡಬೇಕಾಗಿದೆ. ಇಂತಹ ಸೇವೆಗಳಲ್ಲಿ ಭಾರತೀಯ ಕರವಳಿ ರಕ್ಷಣಾ ಪಡೆಯು ಸದಾ ಮೂಂಚೂಣಿಯಲ್ಲಿದೆ’ ಎಂದರು.
‘ದೇಸೀ ತಂತ್ರಜ್ಞಾನದಡಿ ಅಭಿವೃದ್ಧಿಪಡಿಸಿರುವ ಎಎಲ್‌ಎಚ್ ಮಾರ್ಕ್ 3 ಹೆಲಿಕಾಪ್ಟರ್‌ಗಳ ಸೇರ್ಪಡೆಯಿಂದ ಕರಾವಳಿ ರಕ್ಷಣೆ ಪಡೆಗೆ ಹೆಚ್ಚಿನ ಬಲ ಬಂದಿದೆ. ಹೆಚ್ಚು ವಿಸ್ತಾರ ಪ್ರದೇಶಗಳಲ್ಲಿ ಕಾರ್ಯನಿರ್ವಹಣೆ ಸಾಧ್ಯವಾಗಿದೆ. ಕಡಲ ತೀರದಿಂದ 350 ಕಿ.ಮೀ ದೂರದಲ್ಲಿ ನೌಕೆಯಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾದಾಗ ಅವರನ್ನು ತಕ್ಷಣವೇ ಈ ಹೆಲಿಕಾಪ್ಟರ್‌ನಲ್ಲಿ ಕರೆತಂದು ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಯಿತು’ ಎಂದು ಅವರು ಉದಾಹರಣೆ ನೀಡಿದರು.
ಕರಾವಳಿ ರಕ್ಷಣಾ ಪಡೆಯ ಕರ್ನಾಟಕದ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ ಇದ್ದರು.
‘ಬೇಕಿದೆ ರಾತ್ರಿ ಕಾರ್ಯಾಚರಿಸುವ ಡ್ರೋನ್’
‘ಹೆಲಿಕಾಪ್ಟರ್ ಬಳಸಿ ರಾತ್ರಿ ಕಾರ್ಯಾಚರಣೆ ಕಷ್ಟ. ಹಾಗಾಗಿ ಕರಾವಳಿ ರಕ್ಷಣಾ ಪಡೆಯು ರಾತ್ರಿ ವೇಳೆಯೂ ಕಾರ್ಯಾಚರಣೆ ನಡೆಸುವಂತಹ ಸುಸಜ್ಜಿತ ಡ್ರೋನ್‌ಗಳನ್ನು ಹೊಂದುವ ಅಗತ್ಯವಿದೆ. ಇದರಿಂದ ಸಮುದ್ರದಲ್ಲಿ ಗಸ್ತು ನಿರ್ವಹಣೆಯೂ ಸುಲಭವಾಗಲಿದೆ’ ಎಂದು ಬಾಡ್ಕರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘4 ಡಾರ್ನಿಯರ್ ವಿಮಾನ ಸೇರ್ಪಡೆ ಶೀಘ್ರ’
‘ಮಂಗಳೂರಿಗೆ ಶೀಘ್ರವೇ ನಾಲ್ಕು ಡಾರ್ನಿಯರ್ ವಿಮಾನಗಳು ಸೇರ್ಪಡೆಯಾಗಲಿವೆ. ಅವುಗಳಿಗೆ ಬಜಪೆ ವಿಮಾನನಿಲ್ದಾಣದಲ್ಲಿ ಹ್ಯಾಂಗರ್ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಬಾಡ್ಕರ್ ತಿಳಿಸಿದರು.
‘ಹೋವರ್ ಕ್ರಾಫ್ಟ್ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಬಳಕೆ’
‘ಮಂಗಳೂರಿನಲ್ಲಿದ್ದ ಎರಡು ಹೋವರ್‌ಕ್ರಾಫ್ಟ್‌ಗಳನ್ನು ಭಾರತ– ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಬಳಸಲಾಗುತ್ತಿದೆ. ಕರಾವಳಿ ರಕ್ಷಣೆ ಪಡೆಯಲ್ಲಿ ಒಟ್ಟು 18 ಹೋವರ್‌ಕ್ರಾಫ್ಟ್‌ಗಳಿವೆ. ಇನ್ನಷ್ಟು ಹೋವರ್ ಕ್ರಾಫ್ಟ್‌ಗಳನ್ನು ಖರೀದಿಸಲಾಗುತ್ತಿದ್ದು, ಆ ಬಳಿಕ ಅವಶ್ಯಕತೆ ಬಿದ್ದರೆ ಮಂಗಳೂರಿಗೂ ಒದಗಿಸಲಾಗುವುದು’ ಎಂದು ಬಾಡ್ಕರ್ ಮಾಹಿತಿ ನೀಡಿದರು.
ಮೀನುಗಾರರ ಜೊತೆ ಸಮಾಲೋಚನೆ
ಕರ್ನಾಟಕ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರ ಮುಖಂಡರ ಹಾಗೂ ಮೀನುಗಾರಿಕಾ ದೋಣಿಗಳ ಮಾಲೀಕರ ಜೊತೆ ಬಾಡ್ಕರ್ ಅವರು ಸಮಾಲೋಚನೆ ನಡೆಸಿದರು.
ಸಂಕಷ್ಟದ ಸಂದರ್ಭದಲ್ಲಿ ಕರಾವಳಿ ರಕ್ಷಣಾ ಪಡೆಯು ಮೀನುಗಾರರ ನೆರವಿಗೆ ಧಾವಿಸಲಿದೆ ಎಂದು ಸ್ಥೈರ್ಯ ತುಂಬಿದರು. ಸಮುದ್ರಕ್ಕೆ ತೆರಳುವಾಗ ಸುರಕ್ಷತಾ ಸಾಧನಗಳನ್ನು ಧರಿಸುವಂತೆ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕಿವಿಮಾತು ಹೇಳಿದರು.
ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪ ಪ್ರದೇಶಗಳು ಕರಾವಳಿ ರಕ್ಷಣಾ ಪಡೆಯ ಪಶ್ಚಿಮ ವಲಯದ ವ್ಯಾಪ್ತಿಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.