ADVERTISEMENT

ಮಂಗಳೂರು | ಮಳೆಯ ಹೊಡೆತ: ಕೊಕ್ಕೊ ಧಾರಣೆ ಕುಸಿತ

ಹಸಿ ಬೀನ್ಸ್ ದರ ಕೆ.ಜಿ.ಗೆ ₹100ರಿಂದ ₹130, ಕೊಕ್ಕೊ ಗಿಡಗಳಿಗೆ ವ್ಯಾಪಿಸಿದ ಕೊಳೆರೋಗ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 4:11 IST
Last Updated 26 ಜುಲೈ 2024, 4:11 IST
ಕೊಳೆರೋಗದಿಂದ ಎಲೆ ಉದುರಿಸಿರುವ ಕೊಕ್ಕೊ ಗಿಡ
ಕೊಳೆರೋಗದಿಂದ ಎಲೆ ಉದುರಿಸಿರುವ ಕೊಕ್ಕೊ ಗಿಡ   

ಮಂಗಳೂರು: ಏಪ್ರಿಲ್‌ ತಿಂಗಳಿನಲ್ಲಿ ಕೆ.ಜಿ.ಯೊಂದಕ್ಕೆ ₹300ರ ಗಡಿ ದಾಟಿದ್ದ ಕೊಕ್ಕೊ ಧಾರಣೆ ಜುಲೈ ಅಂತ್ಯದ ವೇಳೆ ₹100ಕ್ಕೆ ಕುಸಿದಿದೆ.

ಬುಧವಾರ ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಹಸಿ ಬೀನ್ಸ್ ದರ ಕೆ.ಜಿ.ಗೆ ₹100ರಿಂದ ₹130 ಇತ್ತು. ಏಪ್ರಿಲ್‌ನಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತ ಬೆಳೆಗಾರರಲ್ಲಿ ಅಚ್ಚರಿ ಮೂಡಿಸಿದ್ದ ಕೊಕ್ಕೊ ಧಾರಣೆ, ಗರಿಷ್ಠ ₹330ಕ್ಕೆ ತಲುಪಿ ದಾಖಲೆ ನಿರ್ಮಿಸಿತ್ತು. ನಂತರ ಇಳಿಮುಖದತ್ತ ಸಾಗಿದ ದರ ಮೇ ತಿಂಗಳಿನಲ್ಲಿ ಬಹುತೇಕ ಸ್ಥಿರವಾಗಿತ್ತು. ಜೂನ್‌ನಲ್ಲಿ ಕೊಕ್ಕೊ ಧಾರಣೆ ಕೆ.ಜಿ.ಗೆ ಸರಾಸರಿ ₹180ರಿಂದ ₹200 ಇತ್ತು. ಜುಲೈ ಮೊದಲ ವಾರದಲ್ಲಿ ಹಸಿ ಬೀನ್ಸ್ ದರ ₹160ರಿಂದ ₹190 ಇದ್ದರೆ, ಒಣ ಬೀನ್ಸ್ ದರ ₹560ರಿಂದ ₹600 ಇತ್ತು. ಪ್ರಸ್ತುತ ಒಣ ಬೀನ್ಸ್‌ ಧಾರಣೆ ಕೆ.ಜಿ.ಗೆ ₹540ರಿಂದ ₹570 ಇದೆ.

‘ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆಯುವ ಕೊಕ್ಕೊ ದರ ಏರಿಳಿತ ಆಗುತ್ತಿದ್ದ ಕಾರಣ ಹಲವಾರು ಕೃಷಿಕರು ಕೊಕ್ಕೊ ಗಿಡಗಳನ್ನು ತೋಟದಿಂದ ತೆಗೆದು ಹಾಕಿದ್ದರು. ಈ ಬಾರಿ ಕೊಕ್ಕೊಗೆ ಪುನಃ ದರ ಸಿಕ್ಕಿದ್ದನ್ನು ಕಂಡು ಮತ್ತೆ ಕೊಕ್ಕೊ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ತೆಂಗಿನ ತೋಟದಲ್ಲಿ ಕೂಡ ಕೊಕ್ಕೊ ಬೆಳೆಸಬಹುದು. ತೆಂಗಿನ ತೋಟದಲ್ಲಿ ಕೊಕ್ಕೊ ಬೆಳೆದರೆ ಇಳುವರಿ ಹೆಚ್ಚು ಎಂಬುದು ಹಲವಾರು ರೈತರ ಅಭಿಪ್ರಾಯ’ ಎನ್ನುತ್ತಾರೆ ಮಾಣಿಯ ಕೃಷಿಕ ಕೃಷ್ಣ ಭಟ್.

ADVERTISEMENT

‘ಕಾಡುಪ್ರಾಣಿ ಹಾವಳಿ ಹೆಚ್ಚಾಗಿ, ತೋಟದಿಂದ ಕೊಕ್ಕೊ ಗಿಡಗಳನ್ನು ತೆಗೆಯಬೇಕಾಗಿ ಬಂತು. ಈಗ ಬೆರಳೆಣಿಕೆಯಷ್ಟು ಗಿಡಗಳು ಮಾತ್ರ ಇವೆ. ಕೆ.ಜಿ.ಗೆ ₹100ಕ್ಕಿಂತ ಅಧಿಕ ದರ ಇದ್ದರೆ ಕೊಕ್ಕೊ ಬೆಳೆ ರೈತರಿಗೆ ಲಾಭದಾಯಕ’ ಎಂಬುದು ಅವರ ಅಭಿಪ್ರಾಯ.

‘ಮಳೆಗಾಲದ ಹಸಿ ಬೀನ್ಸ್ ತೂಕ ಜಾಸ್ತಿ. ಅದಕ್ಕಾಗಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಕೊಕ್ಕೊ ಧಾರಣೆ ಕುಸಿತವಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಕೊಕ್ಕೊ ಕೆ.ಜಿ.ಗೆ ಗರಿಷ್ಠ ₹334 ಧಾರಣೆ ದೊರೆತಿತ್ತು. ಕಳೆದ ವಾರ ಕೆ.ಜಿ.ಗೆ ₹170ರಂತೆ ಮಾರಾಟ ಮಾಡಿದ್ದೇನೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಕ್ಕೊ ಬೇಡಿಕೆ ಉತ್ಪನ್ನವಾಗಿದ್ದು, ಸೆಪ್ಟೆಂಬರ್ ನಂತರ ಧಾರಣೆ ಏರಿಕೆಯಾಗುವ ನಿರೀಕ್ಷೆ ಇದೆ’ ಎಂದು ಕುಂಬಳೆಯ ಶಿವರಾಂ ಭಟ್ ಪ್ರತಿಕ್ರಿಯಿಸಿದರು.

‘ಪ್ರತಿವರ್ಷ ಮಳೆಗಾಲದಲ್ಲಿ ಕೊಕ್ಕೊ ಗಿಡ ಎಲೆ ಎದುರಿಸುವುದು ಸಾಮಾನ್ಯ. ಆದರೆ, ಈ ಬಾರಿ ಹಿಂದಿನ ವರ್ಷಗಳಿಗಿಂತ ಹೆಚ್ಚು ಗಿಡಗಳಿಗೆ ಹಾನಿಯಾಗಿದೆ. ಮಳೆ ಅಧಿಕವಾಗಿದ್ದರಿಂದ ಕೊಳೆರೋಗ ಬಂದಿರುವ ಸಾಧ್ಯತೆ ಇದೆ. ಇದರಿಂದ ಗಿಡಗಳು ಎಲೆ ಉದುರಿಸಿರಬಹುದು. ಮಳೆ ಬಿಡುವು ಕೊಟ್ಟಾಗ ಬೋರ್ಡೊ ಮಿಶ್ರಣ ಸಿಂಪಡಿಸಬೇಕಾಗಿದೆ’ ಎಂದು ಅವರು ಹೇಳಿದರು.

ದರ ಏರಿಕೆಯ ನಿರೀಕ್ಷೆ ಜಗತ್ತಿನ ಎರಡನೇ ಅತಿ ಹೆಚ್ಚು ಕೊಕ್ಕೊ ಉತ್ಪಾದಿಸುವ ದೇಶ ಘಾನಾ. ಈ ದೇಶದಲ್ಲಿ ಈ ಬಾರಿ ಕೊಕ್ಕೊ ಬೀಜಕ್ಕೆ ರೋಗ ತಗುಲಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಕ್ಕೊ ಧಾರಣೆ ಏರಿಕೆಯಾಗಬಹುದು. ಹಾಗಾಗಿ ಮಳೆಗಾಲದ ನಂತರ ಸ್ಥಳೀಯ ಮಾರುಕಟ್ಟೆಯಲ್ಲೂ ಕೊಕ್ಕೊಗೆ ಉತ್ತಮ ದರ ದೊರೆಯಬಹುದು ಎಂಬ ನಿರೀಕ್ಷೆ ಕೃಷಿಕರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.