ಮಂಗಳೂರು: ಎರಡು ಬಸ್‌ಗಳು ಪರಸ್ಪರ ಹಿಂದಿಕ್ಕಲು ನಡೆಸಿದ ಪೈಪೋಟಿಯಿಂದಾಗಿ ಸಂಭವಿಸಿದ ಅಪಘಾತದಿಂದಾಗಿ, ಪಿಕಪ್ ವಾಹನದಲ್ಲಿದ್ದ ಭಾರಿ ಪ್ರಮಾಣದ ಮೊಟ್ಟೆಗಳು ನಗರದ ವೆಲೆನ್ಸಿಯಾ ಬಳಿ ಶುಕ್ರವಾರ ರಸ್ತೆ ಪಾಲಾಗಿವೆ.
ಇಬ್ರಾಹಿಂ ಸಿನಾನ್ ಅವರು ತಮ್ಮ ಪಿಕಪ್ ವಾಹನದಲ್ಲಿ ಮೊಟ್ಟೆಗಳನ್ನು ತುಂಬಿಸಿಕೊಂಡು ನಗರಕ್ಕೆ ಬಂದಿದ್ದರು. ವೆಲೆನ್ಸಿಯಾ ರಸ್ತೆಯಲ್ಲಿರುವ ಮರಿಯಮ್ ಟ್ರೇಡರ್ಸ್ ಎದುರು ರಸ್ತೆಯ ಎಡಬದಿಯಲ್ಲಿ ವಾಹನ ನಿಲ್ಲಿಸಿದ್ದರು. ಅವರ ಜೊತೆಯಿದ್ದ ಸೇಲ್ಸ್ ಅಧಿಕಾರಿ ಮುಹಮ್ಮದ್ ನಿಹಾಲ್ ಅವರು ವಾಹನದ ಹಿಂಬದಿ ನಿಂತಿದ್ದರು.
‘ಅಷ್ಟರಲ್ಲಿ ಕೋಟಿ ಚನ್ನಯ ವೃತ್ತ–ಕಂಕನಾಡಿ ಜಂಕ್ಷನ್ ರಸ್ತೆಯಲ್ಲಿ ಎರಡು ಬಸ್‌ಗಳು ಪೈಪೋಟಿಗೆ ಬಿದ್ದು ಹಾದುಹೋದವು. ಪರಸ್ಪರ ಹಿಂದಿಕ್ಕುವ ಭರದಲ್ಲಿ ಒಂದು ಬಸ್ ಮುಹಮ್ಮದ್ ನಿಹಾಲ್ ಎಡ ಕೈಗೆ ಗುದ್ದಿಕೊಂಡು ಹೋಗಿ ಪಿಕಪ್ ವಾಹನಕ್ಕೂ ಡಿಕ್ಕಿ ಹೊಡೆಯಿತು. ಆ ವಾಹನವು ಎದುರು ನಿಂತಿದ್ದ ಸರಕು ಸಾಗಣೆ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಯಿತು. ಪಿಕಪ್ ವಾಹನದಲ್ಲಿದ್ದ ಮೊಟ್ಟೆಗಳು ರಸ್ತೆಗೆ ಉರುಳಿಬಿದ್ದು ಹಾನಿಗೊಂಡವು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಈ ಅಪಘಾತದಿಂದ ವಾಹನದಲ್ಲಿದ್ದ ₹ 1.65 ಲಕ್ಷ ಮೌಲ್ಯದ ಮೌಲ್ಯದ ಮೊಟ್ಟೆಗಳು ಹಾನಿಗೊಂಡಿವೆ’ ಎಂದು ಇಬ್ರಾಹಿಂ ಸಿನಾನ್ ಅವರು ಮಂಗಳೂರು ಪೂರ್ವ ಸಂಚಾರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಗಾಯಾಳು ಮುಹಮ್ಮದ್ ನಿಹಾಲ್ ಅವರನ್ನು ಸಾರ್ವಜನಿಕರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.