ADVERTISEMENT

ಇಬ್ಬರು ಶಾಸಕರು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು

ಗುಂಡ್ಯದಲ್ಲಿ ಅನುಮತಿ ಪಡೆಯದೆ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:23 IST
Last Updated 17 ನವೆಂಬರ್ 2024, 8:23 IST

ಉಪ್ಪಿನಂಗಡಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧದ ನೆಪದಲ್ಲಿ ಅನುಮತಿ ಪಡೆಯದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದ ಆರೋಪದಲ್ಲಿ ಸುಳ್ಯ ಮತ್ತು ಬೈಂದೂರು ಶಾಸಕರನ್ನು ಒಳಗೊಂಡಂತೆ 15 ಮಂದಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 189 (2) 126 (2), 285, ಜತೆಗೆ 190ರ ಅನುಸಾರ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.15ರಂದು ಕಡಬ ತಾಲ್ಲೂಕು ಸಿರಿಬಾಗಿಲು ಗ್ರಾಮದ ಲಕ್ಷ್ಮೀವೆಂಕಟೇಶ್ ದೇವಸ್ಥಾನದ ಮಾಡ ಮೈದಾನದಲ್ಲಿ ಮಲೆನಾಡ ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆದಿತ್ತು. ಮಧ್ಯಾಹ್ನ ಊಟದ ಬಳಿಕ ಪ್ರತಿಭಟನಾ ಸಭೆಯ ಸ್ಥಳದಿಂದ ಸುಮಾರು 1 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯಪೇಟೆಗೆ ಬಂದು ರಸ್ತೆ ತಡೆಯನ್ನು ಪ್ರಾರಂಭಿಸಲಾಗಿದೆ. ರಸ್ತೆಯ ಮಧ್ಯದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಕಿಶೋರ್ ಶಿರಾಡಿ, ಸುಧೀರ್ ಶೆಟ್ಟಿ, ನವೀನ್ ನೆರಿಯ, ಸತೀಶ್ ಶೆಟ್ಟಿ ಬಲ್ಯ, ಉಮೇಶ್ ಸಾಯಿರಾಮ್, ವೆಂಕಟ ಒಳಲಂಬೆ, ಪ್ರಕಾಶ್ ಗುಂಡ್ಯ, ಪ್ರಸಾದ್ ನೆಟ್ಟಣ, ಸೈಯದ್ ಮೀರಾನ್ ಸಾಹೇಬ್, ಉಮೇಶ್ ಬಲ್ಯ, ನವೀನ್ ರೆಖ್ಯಾ, ಯತೀಶ್ ಗುಂಡ್ಯ, ಗಣೇಶ್ ಮೊದಲಾದವರು ಅಕ್ರಮಕೂಟ ಸೇರಿ ರಸ್ತೆ ತಡೆಮಾಡಿ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ತಡೆಮಾಡಿದರೆ ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ ಎಂದು ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಪಿಎಸ್‌ಐ ಅವಿನಾಶ್ ಹಾಗೂ ಇತರ ಸಿಬ್ಬಂದಿ ತಿಳಿ ಹೇಳಿದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಖಂಡನೆ: ರೈತರ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಶಾಸಕರು, ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಆಕ್ರೋಶವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.