ADVERTISEMENT

ಮಂಗಳೂರು | ಚರಂಡಿಗೆ ಹಾನಿ: ಕಟ್ಟಡಕ್ಕೆ ಅಪಾಯದ ಆತಂಕ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 14:25 IST
Last Updated 5 ಜುಲೈ 2024, 14:25 IST
ರಾಮಕೃಷ್ಣ ಸಂಸ್ಥೆಯ ಕಟ್ಟಡದ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡ
ರಾಮಕೃಷ್ಣ ಸಂಸ್ಥೆಯ ಕಟ್ಟಡದ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡ   

ಮಂಗಳೂರು: ಬಂಟ್ಸ್  ಹಾಸ್ಟೆಲ್‌ ವೃತ್ತದಲ್ಲಿರುವ ರಾಮಕೃಷ್ಣ ಶಿಕ್ಷಣ ಸಂಸ್ಥೆಯ ಸಮೀಪದಲ್ಲಿ ನಿರ್ಮಿಸುತ್ತಿರುವ ಬಹುಮಹಡಿ ಕಟ್ಟಡದಿಂದ ಸಂಸ್ಥೆಯ ಕಟ್ಟಡಕ್ಕೆ ಆತಂಕ ಎದುರಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘವು ಜಿಲ್ಲಾಧಿಕಾರಿ ಮತ್ತು ಮೇಯರ್‌ಗೆ ಮನವಿ ಸಲ್ಲಿಸಿದೆ.

ಶತಮಾನದ ಹಿಂದಿನಿಂದ ಇಲ್ಲಿ ಪ್ರಾಕೃತಿಕವಾಗಿ ನೀರು ಹರಿಯುವ ಸಣ್ಣ ತೋಡಿನ ರೂಪದ ಚರಂಡಿ ಇದ್ದು, ಬಹು ಮಹಡಿ ಕಟ್ಟಡ ನಿರ್ಮಾಣದಿಂದ ಚರಂಡಿಗೆ ಹಾನಿಯಾಗಿದೆ. ಕಟ್ಟಡಕ್ಕಾಗಿ ಆಳವಾಗಿ ಭೂಮಿಯನ್ನು ಅಗೆಯಲಾಗಿದ್ದು, ಸುರಕ್ಷೆಗೆ ನಿರ್ಮಿಸುತ್ತಿರುವ ರಿಟೇನಿಂಗ್ ವಾಲ್ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಕೆಲವು ವರ್ಷಗಳ ಹಿಂದೆ ಕಾಮಗಾರಿ ಆರಂಭಿಸುವಾಗ ನಿರ್ಮಾಣ ಕಂಪನಿಯ ಮುಖ್ಯಸ್ಥರು ರಿಟೇನಿಂಗ್ ವಾಲ್ ಪೂರ್ಣಗೊಂಡ ಬಳಿಕ ಹಿಂದಿನಂತೆ ಚರಂಡಿ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ, ಅವರ ಮಾತಿಗೆ ಬದ್ಧರಾಗಿರದ ಕಾರಣ ರಾಮಕೃಷ್ಣ ಸಂಸ್ಥೆಯ ಕಟ್ಟಡಕ್ಕೆ ಅಪಾಯದ ಆತಂಕ ಎದುರಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಮಣ್ಣು ಸಡಿಲಗೊಂಡು ಜರಿದು ಬೀಳುವ ಸಾಧ್ಯತೆ ಇದೆ. ಹೀಗಾದರೆ ಕಾಲೇಜಿನ ಕಟ್ಟಡ ಹಾಗೂ ಅದರಲ್ಲಿರುವ ಸಾವಿರಾರು ವಿದ್ಯಾರ್ಥಿಗಳ ಜೀವ ಅಪಾಯಕ್ಕೆ ಸಿಲುಕಲಿದೆ. ಹೀಗಾಗಿ, ಕೂಡಲೇ ಮಧ್ಯಪ್ರವೇಶಿಸಿ ಕಟ್ಟಡ ನಿರ್ಮಾಣ ಕಂಪನಿಗೆ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಬೇಕಿದೆ ಎಂದು ವಿನಂತಿಲಾಗಿದೆ.

ADVERTISEMENT

ಕಟ್ಟಡ ನಿರ್ಮಾಣ ಕಂಪನಿಗೆ ಮೇ 27ರಂದು ನೋಟಿಸ್ ಜಾರಿಗೊಳಿಸಿ, ಸುರಕ್ಷಾ ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು. ಆದರೆ, ಸ್ಪಂದನೆ ಸಿಗದ ಕಾರಣ ಜಿಲ್ಲಾಧಿಕಾರಿ ಮತ್ತು ಮೇಯರ್‌ಗೆ ದೂರು ನೀಡಲಾಗಿದೆ ಎಂದು ಬಂಟರ ಸಂಘ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.