ADVERTISEMENT

ಪುತ್ತೂರು | ಶಾಸಕ ಅಶೋಕ್‌ ಕುಮಾರ್‌ ರೈ ಬೆಂಬಲಿಗರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 18:05 IST
Last Updated 17 ಮಾರ್ಚ್ 2024, 18:05 IST
ಅಶೋಕ್‌ ಕುಮಾರ್‌ ರೈ
ಅಶೋಕ್‌ ಕುಮಾರ್‌ ರೈ   

ಪುತ್ತೂರು: ‘ಇಲ್ಲಿನ ಶಾಸಕ ಅಶೋಕ್‌ ಕುಮಾರ್‌ ರೈ ಅವರ ಅವಧಿಯಲ್ಲಿ ಬಿಡುಗಡೆಯಾದ ಅನುದಾನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಟೀಕೆಯನ್ನು ಸಹಿಸದೇ 15ಕ್ಕೂ ಹೆಚ್ಚು ಮಂದಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ‌ವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸದಸ್ಯ ಜಯಾನಂದ ಕೆ. ದೂರು ನೀಡಿದ್ದಾರೆ.

ಈ ದೂರಿನ ಆಧಾರದಲ್ಲಿ ಇಲ್ಲಿನ ನಗರ ಠಾಣೆಯಲ್ಲಿ ಪ್ರಜ್ವಲ್ ರೈ, ಸನತ್ ರೈ ಸಹಿತ 15 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ವಿವರಗಳಿದ್ದ ಬ್ಯಾನರ್ ಪ್ರದರ್ಶಿಸಿಕೊಂಡು, ಚೆಂಡೆ ಬಡಿಯುತ್ತಾ ಬಂದ ಆರೋಪಿಗಳು ನನ್ನನ್ನು, ನನ್ನ ತಾಯಿಯನ್ನು, ಪತ್ನಿಯನ್ನು ಮತ್ತು ಮಕ್ಕಳನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಗೋಡೆಗೆ ಕಾಲಿನಿಂದ ಒದ್ದು ಅಸಭ್ಯವಾಗಿ ವರ್ತಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಬಗ್ಗೆ ಭಾರಿ ಬರೆಯುತ್ತಿಯಾ. ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಜಯಾನಂದ ಆರೋಪಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೃಜೇಶ್‌ ಚೌಟ ಈ ಘಟನೆಯನ್ನು ಖಂಡಿಸಿದ್ದು, ‘ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕರ ಬಂದ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲಿಸರು ಯಾವುದೇ ಪ್ರಭಾವಕ್ಕೆ ಮಣಿಯದೇ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು‘ ಎಂದು ಒತ್ತಾಯಿಸಿದ್ದಾರೆ.

ಅರುಣ್ ಕುಮಾರ್ ಪುತ್ತಿಲ, ಜಗನ್ನಿವಾಸ್ ರಾವ್ ಸಹಿತ ಬಿಜೆಪಿ ನಾಯಕರು ಜಯಾನಂದ್ ಬಂಗೇರರ ಮನೆಗೆ ಭಾನುವಾರ ಭೇಟಿ ನೀಡಿ ಧೈರ್ಯ ತುಂಬಿದರು. ಘಟನೆಯನ್ನು ಖಂಡಿಸಿರುವ ಪುತ್ತಿಲ, ‘ಪ್ರಜಾಪ್ರಭುತ್ವ ಮತ್ತು ಸಂವಿಧಾನವು ನಾಗರಿಕರಿಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಅಧಿಕಾರ ಕೊಟ್ಟಿದೆ. ಗೂಂಡಾವರ್ತನೆ ನಡೆಸುವುದು ಎಷ್ಟು ಸರಿ. ಎಲ್ಲ ಆರೋಪಿಗಳ ವಿರುದ್ಧವೂ ಕ್ರಮವಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.