ಮಂಗಳೂರು: ‘ಪುನೀತ್ ರಾಜ್‌ಕುಮಾರ್ ದೇಶದ ಮುತ್ತು. ದೇವರು ಏಕೆ ಇಷ್ಟು ಬೇಗ ಅವರನ್ನು ಕರೆಸಿಕೊಂಡರು? ವಿಧಿ ಯಾಕೆ ಇಷ್ಟು ಕ್ರೂರತೆ ಮೆರೆಯಿತು? ನಾವು ಮತ್ತೆ ಆ ಮುತ್ತನ್ನು ಪಡೆಯಲು ಸಾಧ್ಯವಿಲ್ಲ. ಇಳಿ ವಯಸ್ಸಿನ ನನ್ನನಾದರೂ ದೇವರು ಕರೆಸಿಕೊಂಡು, ಆ ಮಗುವನ್ನು ಉಳಿಸಿಕೊಳ್ಳಬಾರದಿತ್ತೆ’ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.
ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಭಾಭವನದಲ್ಲಿ ಮಂಗಳವಾರ ನಡೆದ ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಗದ್ಗದಿತರಾಗಿ ಅವರು ಮಾತನಾಡಿದರು.
‘ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದಾರೆ. ಅವರನ್ನು ಮತ್ತೆ ನಾವು ಕರೆತರಲು ಸಾಧ್ಯವಾಗದ ಲೋಕಕ್ಕೆ ಹೋಗಿದ್ದಾರೆ. 84 ವರ್ಷದ ನಾನಿದ್ದೆ. ನನ್ನನ್ನಾದರೂ ಕರೆದುಕೊಂಡು ಹೋಗಬಾರದಿತ್ತೇ? ಪರಮಾತ್ಮ ನೀನು ಹಾಗೆ ಮಾಡಬಾರದಿತ್ತು’ ಎಂದು ಭಾವುಕರಾಗಿ ಹೇಳಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪಾಲಿಕೆ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ. ರಾಜರಾಂ, ಗುರು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವೈ. ಶೈಲೇಂದ್ರ ಸುವರ್ಣ, ಸಾಮಾಜಿಕ ಮುಖಂಡ ಸತ್ಯಜಿತ್ ಸುರತ್ಕಲ್, ಪಾಲಿಕೆ ಸದಸ್ಯ ಎ.ಸಿ. ವಿನಯರಾಜ್, ಪದ್ಮರಾಜ್ ಆರ್. ನುಡಿನಮನ ಸಲ್ಲಿಸಿದರು.
ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನದ ಮಹೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುದ್ರೋಳಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಟ್ರಸ್ಟಿಗಳಾದ ಎಂ.ಶೇಖರ್ ಪೂಜಾರಿ, ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ.ಬಿ.ಟಿ. ಅನಸೂಯಾ, ಉಪಾಧ್ಯಕ್ಷ ಬಿ.ಜಿ.ಸುವರ್ಣ, ಶೈಲೇಂದ್ರ ಸುವರ್ಣ, ಲೀಲಾಕ್ಷ ಕರ್ಕೇರ, ಸೂರ್ಯಕಾಂತ ಜೆ.ಸುವರ್ಣ, ಚಂದನದಾಸ್, ಗೌರವಿ ಪಿ.ಕೆ., ಕಿಶೋರ್ ದಂಡಕೇರಿ, ಪಾಲಿಕೆ ಸದಸ್ಯರಾದ ಶಶಿಧರ್ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ನವೀನ್ ಡಿಸೋಜ, ಅನಿಲ್ ಪೂಜಾರಿ ಇದ್ದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಜೆ.ಪಿ. ನಾರಾಯಣ ಸ್ವಾಮಿ ಪ್ರತಿಷ್ಠಾನ, ಯುವವಾಹಿನಿ, ಗುರು ಚಾರಿಟಬಲ್ ಟ್ರಸ್ಟ್, ಗುರುಬೆಳದಿಂಗಳು ಹಾಗೂ ನಾನಾ ಸಂಘ ಸಂಸ್ಥೆಗಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನೇಶ್ ರಾಯಿ ಮತ್ತು ಅರುಣ್ ಉಳ್ಳಾಲ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.