ADVERTISEMENT

ವಾಟ್ಸ್‌ಆ್ಯಪ್ ಅಭಿಯಾನ | ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಹರೀಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 14:05 IST
Last Updated 7 ಜೂನ್ 2024, 14:05 IST
ಹರೀಶ್ ಕುಮಾರ್
ಹರೀಶ್ ಕುಮಾರ್   

ಮಂಗಳೂರು: ‘ನಾನು ರಾಜೀನಾಮೆಯನ್ನು ಕಿಸೆಯಲ್ಲಿ ಇಟ್ಟುಕೊಂಡು ಓಡಾಡುವುದಿಲ್ಲ, ಅದನ್ನು ಪೇಟೆಯಿಂದ ತರಲೂ ಆಗುವುದಿಲ್ಲ. ಯಾರೋ ವಾಟ್ಸ್‌ಆ್ಯಪ್ ಯುನಿವರ್ಸಿಟಿಯಲ್ಲಿ ಬರೆದಿರುವುದಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ’ ಎನ್ನುವ ಮೂಲಕ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ತಮ್ಮ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವವರಿಗೆ ತಿರುಗೇಟು ನೀಡಿದರು.

‘ಲೋಕಸಭೆ ಚುನಾವಣೆ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರಂತರವಾಗಿ ಸೋಲುತ್ತಿದ್ದು, ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಅವರನ್ನು ಬದಲಾಯಿಸಬೇಕು’ ಎಂದು ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ನಡೆಯುತ್ತಿರುವ ಅಭಿಯಾನದ ಕುರಿತು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಿಲ್ಲಾ ಘಟಕದ ಅಧ್ಯಕ್ಷರನ್ನು ಪಕ್ಷ ನೇಮಕ ಮಾಡುತ್ತದೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಅರಿವು ಪಕ್ಷಕ್ಕೆ ಇದೆ. ಚುನಾವಣೆಯಲ್ಲಿ ಪಕ್ಷ ಸೋತ ಕಾರಣಕ್ಕಾಗಿ ನಾನು ಓಡಿ ಹೋಗಲು ಆಗದು. ಈ ಹಿಂದೆ ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ ಚುನಾವಣೆಯಲ್ಲಿ ಸೋತಿದ್ದಾರೆ. ಆಗ ಯಾರೂ ಜಿಲ್ಲಾ ಘಟಕದ ಅಧ್ಯಕ್ಷರ ರಾಜೀನಾಮೆ ಕೇಳಲಿಲ್ಲ. ಪಕ್ಷ ಸೋತಾಗ ಜಿಲ್ಲಾ ಘಟಕದ ಅಧ್ಯಕ್ಷರು ರಾಜೀನಾಮೆ ನೀಡಿರುವ ಪ್ರಸಂಗ ಇಲ್ಲ’ ಎಂದರು.

‘ನಾನೂ ಚುನಾವಣೆಗೆ ನಿಂತು ಸೋತಿದ್ದೇನೆ. ಆಗ ಸೋಲಿಗೆ ಕಾರಣ ಕೇಳಿಲ್ಲ. ನಾನು ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ವಿದ್ಯಾರ್ಥಿ ಅಲ್ಲ. ಯಾರೋ ಕೇಳುತ್ತಾರೆಂದು ರಾಜೀನಾಮೆ ನೀಡಲು ಆಗದು. ಜವಾಬ್ದಾರಿ ಇದ್ದವರು ಕೇಳಿದರೆ ಅದನ್ನು ಗಂಭೀರವಾಗಿ ಪರಿಗಣಿಸಬಹುದು’ ಎಂದರು.

ADVERTISEMENT

ಕಾಂಗ್ರೆಸ್ ಜಿಲ್ಲೆಯಲ್ಲಿ ಹಿಂದಿನ ಚುನಾವಣೆಗಿಂತ 1.16 ಲಕ್ಷ ಹೆಚ್ಚುವರಿ ಮತ ಗಳಿಸಿದ್ದು, ರಮಾನಾಥ ರೈ ನೇತೃತ್ವದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ದ್ವೇಷಬಿಟ್ಟು ಕೆಲಸ ಮಾಡಿ: ಎನ್‌ಡಿಎ ಮತ್ತೊಮ್ಮೆ ಅಧಿಕಾರ ಹಿಡಿಯುತ್ತಿದ್ದು, ಇನ್ನಾದರೂ ದ್ವೇಷ ರಾಜಕಾರಣ ಬಿಟ್ಟು ಕೆಲಸ ಮಾಡಲಿ. ಇ ಡಿ, ಆದಾಯ ತೆರಿಗೆ, ಸಿಬಿಐಗೆ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಿ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿದ್ದರು. ಇದು ಯಾರಿಂದಲೂ ಸಾಧ್ಯವಿಲ್ಲ. ಇಂತಹ ದುರಹಂಕಾರದ ವರ್ತನೆಯ ಪರಿಣಾಮ ಬಿಜೆಪಿಗೆ ಈಗಾಗಲಾದರೂ ಅರಿವಾಗಿರಬಹುದು. ವೈಯಕ್ತಿಕ ನಿಂದನೆ, ಕುಚೋದ್ಯದ ಮಾತು ಯಾರಿಗೂ ಹಿತವಲ್ಲ ಎಂದು ಹರೀಶ್ ಕುಮಾರ್ ಹೇಳಿದರು.

ಪಕ್ಷದ ಪ್ರಮುಖರಾದ ಶಾಲೆಟ್ ಪಿಂಟೊ, ಸುರೇಂದ್ರ ಕಂಬಳಿ, ಸುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ಜಯಶೀಲ ಅಡ್ಯಂತಾಯ, ನೀರಜ್ ಪಾಲ್, ಜಿತೇಂದ್ರ ಸುವರ್ಣ, ಭರತೇಶ್ ಅಮೀನ್, ಸುಹಾನ್ ಆಳ್ವ ಇದ್ದರು.

ಹರೀಶ್‌ಕುಮಾರ್ ವಿರುದ್ಧ ಅಭಿಯಾನ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಕಂಡ ಬೆನ್ನಲ್ಲೇ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ರಾಜೀನಾಮೆ ನೀಡಬೇಕು ಎಂಬ ಅಭಿಯಾನ ಆರಂಭವಾಗಿದೆ. ‘ಡಿಸಿಸಿ ಅಧ್ಯಕ್ಷರ ಬದಲಾವಣೆ ಹೋರಾಟ ಸಮಿತಿ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ರಚನೆಯಾಗಿದ್ದು ಇದರಲ್ಲಿ 700ಕ್ಕೂ ಹೆಚ್ಚು ಸದಸ್ಯರು ಇದ್ದಾರೆ ಎನ್ನಲಾಗಿದೆ. ‘ಏಳು ವರ್ಷಗಳಲ್ಲಿ ನಡೆದ ವಿಧಾನಸಭೆ ಲೋಕಸಭೆ ಪುರಸಭೆ ಪಟ್ಟಣ ಪಂಚಾಯಿತಿ ನಗರಸಭೆ ನಗರ ಪಾಲಿಕೆ ಹೀಗೆ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಸೋತಿದ್ದು ಹರೀಶ್‌ಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಇಲ್ಲವಾದಲ್ಲಿ ಹೈಕಮಾಂಡ್ ಜಿಲ್ಲಾ ಘಟಕದ ಅಧ್ಯಕ್ಷರನ್ನು ಬದಲಾಯಿಸಬೇಕು’ ಎಂಬ ಅಭಿಪ್ರಾಯ ಈ ಗ್ರೂಪ್‌ನಲ್ಲಿ ವ್ಯಕ್ತವಾಗಿದೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೆಳ್ತಂಗಡಿ ತಾಲ್ಲೂಕಿನ ನಡ ವಾರ್ಡ್‌ನಲ್ಲಿ ಕೂಡ ಅವರಿಗೆ ಕಾಂಗ್ರೆಸ್‌ಗೆ ಹೆಚ್ಚು ಮತ ಪಡೆಯಲು ಸಾಧ್ಯವಾಗಿಲ್ಲ ತಮ್ಮ ವಾರ್ಡ್‌ನಲ್ಲೇ ಲೀಡ್ ಪಡೆಯಲಾಗವದವರು ಇತರರ ಬಳಿ ಪಕ್ಷ ಸಂಘಟನೆಯ ಬಗ್ಗೆ ಹೇಳುವುದು ಎಷ್ಟು ಸರಿ? ಅವರು ರಾಜೀನಾಮೆ ನೀಡದಿದ್ದರೆ ಡಿಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಕೆಲವರು ಸಂದೇಶ ಹಾಕಿದ್ದಾರೆ. ಈ ಸಂಗತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.