ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಹಲವು ಮೂಲ ಕಾಂಗ್ರೆಸಿಗರಿಗೆ ಅನ್ಯಾಯವಾಗಿದೆ. ಹಲವರಿಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಾಧಾನವಿದೆ. ಹೀಗಾಗಿ ಈ ಬಾರಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುತ್ತದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.
‘ಪಕ್ಷದ ಕಾರ್ಯಕರ್ತರಾಗಲಿ, ನಾಯಕರಾಗಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ. ಇದನ್ನು ನಾನು ಬೇಸರಿಂದ ಹೇಳುತ್ತಿದ್ದೇನೆ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರು ನಾನು ಸತ್ತಿರುವುದಾಗಿ ಭಾವಿಸಿದ್ದಾರೆ. ಈ ರೀತಿ ಆಗಬಾರದಿತ್ತು. ಚುನಾವಣೆ ಘೋಷಣೆ ಆದ ಕೂಡಲೇ ನಾನು ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಕರೆ ಮಾಡಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಹಿರಿತನ, ಜಾತಿ ಹಾಗೂ ವರ್ಗಗಳಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದೆ’ ಎಂದರು.
‘ನನ್ನಲ್ಲಿ ಸಮಾಲೋಚನೆ ಮಾಡಬೇಕೆಂದು ಯಾರಲ್ಲೂ ಹೇಳಿಲ್ಲ. ಈ ರೀತಿ ಸುಳ್ಳು ಹೇಳಬಾರದು. ಸತ್ಯಕ್ಕೆ ದೂರವಾದ ಮಾತನ್ನು ಕಾಂಗ್ರೆಸ್‌ನವರು ಹೇಳಬಾರದು. ಕಾಂಗ್ರೆಸ್‌ನವರು ಪೂಜಾರಿ ಬಳಿ ಸಮಾಲೋಚನೆ ಮಾಡುವುದಿಲ್ಲ. ಅದಕ್ಕಾಗಿ ಪೂಜಾರಿ ಕಣ್ಣೀರು ಸುರಿಸಿ ಕುಳಿತುಕೊಳ್ಳುವುದಿಲ್ಲ. ಏನು ಮಾಡಬೇಕೆಂದು ನನಗೆ ಗೊತ್ತಿದೆ’ ಎಂದು ಹೇಳಿದರು.
ನಿಮ್ಮ ಜತೆಯಲ್ಲಿದ್ದವರು ಏಕೆ ಹೀಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜನಾರ್ದನ ಪೂಜಾರಿ, ಅಧಿಕಾರದ ಲಾಲಸೆ ಎಂದಷ್ಟೇ ಹೇಳಿದರು.
ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಕರುಣಾಕರ, ಶಶಿರಾಜ್ ಅಂಬಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.