ADVERTISEMENT

ನಾಗಬನಕ್ಕೆ ‘ನೆಲೆ’ ನೀಡಿದ ಖಾದರ್!

ಮುಸ್ಲಿಂ ಶಾಸಕನ ಸರ್ವಧರ್ಮ ಸಮನ್ವಯತೆಯ ಪ್ರೀತಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 15:06 IST
Last Updated 6 ಆಗಸ್ಟ್ 2019, 15:06 IST
   

ಮಂಗಳೂರು: ಪೂಜೆ ಮಾಡುತ್ತಿದ್ದ ಮೂಲ ಕುಟುಂಬಕ್ಕೇ ನಾಗಬನ ಹಾಗೂ ಅದರ ಬಾವಿ, ದಾರಿ ಸಹಿತ 20 ಸೆಂಟ್ಸ್ ಉಚಿತವಾಗಿ ನೀಡಿದ ಶಾಸಕ ಯು.ಟಿ. ಖಾದರ್ ಸಾಮರಸ್ಯ ಮೆರೆದಿದ್ದಾರೆ.

ಶಾಸಕ ಯು.ಟಿ. ಖಾದರ್ ಅಜ್ಜ ಮಹಮ್ಮದ್ (ಮಾಜಿ ಶಾಸಕ ಯು.ಟಿ.ಫರೀದ್ ತಂದೆ ) ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕದಲ್ಲಿದ್ದರು. ಅಲ್ಲಿನ ಹಿತ್ತಿಲು (ಸಾಗ್)ನಲ್ಲಿ ಕೃಷಿ ಜಮೀನಿತ್ತು. ಈ ಪೈಕಿ ಸುಮಾರು ಹನ್ನೊಂದು ಎಕರೆ ಜಮೀನು ಯು.ಟಿ. ಖಾದರ್ ಮತ್ತು ಸಹೋದರ–ಸಹೋದರಿಯರಿಗೆ ಬಂದಿತ್ತು.

ಆದರೆ, ಈ ಜಾಗವು ಮೂಲತಃ ಕೆಳದಿ ಸಂಸ್ಥಾನದಲ್ಲಿ ಸೇನಾಧಿಪತಿಯಾಗಿದ್ದ ಈಶ್ವರಯ್ಯ ದಳವಾಯಿ ಅವರಿಗೆ ಸೇರಿದ್ದು, ವಿಟ್ಲ ಅರಮನೆಯ ಡೊಂಬ ಹೆಗ್ಗಡೆ, ‘ಪುಣಚ ಪರಿಯಾಲ್ತಡ್ಕ ಗ್ರಾಮ’ವನ್ನೇ ಉಂಬಳಿಯಾಗಿ (ಕೊಡುಗೆ) ನೀಡಿದ್ದರು. ಅನಂತರ ದಳವಾಯಿ ಕುಟುಂಬ ಗ್ರಾಮವನ್ನು ಕಾಡುಮಠ ಮನೆತನಕ್ಕೆ ಅಡಮಾನ ಇಟ್ಟಿತ್ತು. ಡಿಕ್ಲರೇಶನ್ (ಭೂಮಿಯಲ್ಲಿ ವಾಸಿಸುವವನೇ ಒಡೆಯ) ಕಾನೂನಿಂದಾಗಿ ಈ ಜಾಗವು ಗ್ರಾಮಸ್ಥರ ಕೈ ಸೇರಿದ್ದು, ಕಾಲಕ್ರಮೇಣ ಯು.ಟಿ. ಖಾದರ್ ಅಜ್ಜನ ಪಾಲಾಗಿತ್ತು.

ADVERTISEMENT

ಸುಳ್ಯ ಕೆಎಫ್‌ಡಿಸಿಯ ವಿಭಾಗೀಯ ವ್ಯವಸ್ಥಾಪಕರಾಗಿ (ಡಿಎಫ್ಒ) ನಿವೃತ್ತರಾಗಿರುವ ಪುತ್ತೂರಿನ ಮರೀಲ್ ನಿವಾಸಿ ರವಿರಾಜ್, ಸದ್ಯ ದಳವಾಯಿ ಕುಟುಂಬದ ಮುಖ್ಯಸ್ಥರಾಗಿದ್ದಾರೆ. ಅವರ ಕುಟುಂಬದ ಸಮಸ್ಯೆ ನಿವಾರಣೆಗಾಗಿ, ಹಿರಿತಲೆಮಾರಿನ ಪುಣಚ ಪರಿಯಾಲ್ತಡ್ಕ ಹಿತ್ತಿಲು ಜಮೀನಿನ ನಾಗಬನದಲ್ಲಿ ಪುನರ್ ಪ್ರತಿಷ್ಟೆ, ಪೂಜಾ ವಿಧಿ ವಿಧಾನ ಮಾಡಬೇಕಾದ ತುರ್ತು ಬಂದಿತ್ತು. ಆದರೆ, ಆ ಸ್ಥಳವು ಪಿತ್ರಾರ್ಜಿತ ಹಂಚಿಕೆಯಲ್ಲಿ ಯು.ಟಿ.ಖಾದರ್‌ಗೆ ಬಂದಿತ್ತು.

‘ಈ ಬಗ್ಗೆ, ರವಿರಾಜ್ ದಳವಾಯಿ ಒಂದು ದಿನ ಯು.ಟಿ.ಖಾದರ್ ಬಳಿ ವಿಜ್ಞಾಪಿಸಿದ್ದರು. ಇದಕ್ಕೆ ಸ್ಪಂದಿಸಿದ ಖಾದರ್, ತಮ್ಮ ಅಡಿಕೆ ತೋಟದ ನಾಗಬನ, ನೀರಿನ ಬಾವಿ ಸೇರಿದಂತೆ ಸುಮಾರು 20 ಸೆಂಟ್ಸ್ ಸ್ಥಳವನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ. 2010ರ ಮಾರ್ಚ್ 10ರಂದು ರವಿರಾಜ್ ದಳವಾಯಿ ಕುಟುಂಬದಿಂದ ಇಲ್ಲಿ ನಾಗಬ್ರಹ್ಮಸ್ಥಾನದ ನವೀಕರಣ, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿದ್ದು, ಪ್ರತಿ ವರ್ಷ ನಾಗರ ಪಂಚಮಿ ನಡೆಯುತ್ತ ಬಂದಿದೆ ’ ಎಂದು ರಶೀದ್ ವಿಟ್ಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.