ADVERTISEMENT

ವಿಜಯಾ ಬ್ಯಾಂಕ್‌ ವಿಲೀನಕ್ಕೆ ಕಾಂಗ್ರೆಸ್ ವಿರೋಧ

ಹೋರಾಟಕ್ಕೆ ಸಂಪೂರ್ಣ ಬೆಂಬಲ– ಬಿ.ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 7:02 IST
Last Updated 24 ಸೆಪ್ಟೆಂಬರ್ 2018, 7:02 IST
ಬ್ಯಾಂಕ್‌ಗಳ ವಿಲೀನ
ಬ್ಯಾಂಕ್‌ಗಳ ವಿಲೀನ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ್ಮತಳೆದಿರುವ 87 ವರ್ಷದ ಇತಿಹಾಸವಿರುವ ಸಾರ್ವಜನಿಕ ವಲಯದ ವಿಜಯಾ ಬ್ಯಾಂಕ್‌ ಅನ್ನು ದೇನಾ ಬ್ಯಾಂಕ್‌ ಜೊತೆ ವಿಲೀನಗೊಳಿಸುವುದನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿ ವಿರೋಧಿಸಿದೆ. ಈ ಸಂಬಂಧ ಜಿಲ್ಲೆಯ ಜನರು ನಡೆಸುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದೆ.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ‘ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷವಾಯಿತು. ಲಾಭದಲ್ಲಿರುವ ವಿಜಯಾ ಬ್ಯಾಂಕ್‌ ಅನ್ನು ನಷ್ಟದಲ್ಲಿರುವ ದೇನಾ ಬ್ಯಾಂಕ್‌ ಜೊತೆ ವಿಲೀನ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಈ ನಿರ್ಧಾರವನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಬಲವಾಗಿ ವಿರೋಧಿಸುತ್ತದೆ’ ಎಂದರು.

ಅತ್ತಾವರ ಬಾಲಕೃಷ್ಣ ಶೆಟ್ಟಿ ಸ್ಥಾಪಿಸಿದ ವಿಜಯಾ ಬ್ಯಾಂಕ್‌ಗೆ ಮೂಲ್ಕಿ ಸುಂದರರಾಮ ಶೆಟ್ಟಿಯವರು ಸಂಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಒಂದು ಕಾಲದಲ್ಲಿ ಬ್ಯಾಂಕ್‌ ನಷ್ಟದ ಸುಳಿಗೆ ಸಿಲುಕಿತ್ತು. ಆಗ ಬ್ಯಾಂಕ್‌ ನೌಕರರು ಸಂಬಳ ಪಡೆಯದೇ ಕೆಲಸ ಮಾಡಿ ಸಂಸ್ಥೆಯನ್ನು ಉಳಿಸಿದ್ದರು. ಈಗ ವಿಜಯಾ ಬ್ಯಾಂಕ್‌ ಅನ್ನು ವಿಲೀನಗೊಳಿಸುವ ಮೂಲಕ ಬ್ಯಾಂಕ್‌ ನೌಕರರು ಮತ್ತು ಜಿಲ್ಲೆಯ ಜನರಿಗೆ ನೋವು ನೀಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ದೂರಿದರು.

ADVERTISEMENT

ವಿಜಯಾ ಬ್ಯಾಂಕ್‌ ಅಸ್ತಿತ್ವ ಕಳೆದುಕೊಂಡರೆ ಜಿಲ್ಲೆಗೆ ಹಿನ್ನಡೆಯಾಗುತ್ತದೆ. ಇಂತಹ ಬೆಳವಣಿಗೆ ನಡೆಯುತ್ತಿದ್ದರೂ ಜಿಲ್ಲೆಯ ಸಂಸದರು ಮೌನವಾಗಿದ್ದಾರೆ. ಬಂಟ ಸಮುದಾಯದವರು ಸ್ಥಾಪಿಸಿದ ಬ್ಯಾಂಕ್‌ ಈಗ ಸಾರ್ವಜನಿಕ ಸಂಸದ ಮತ್ತು ಬಂಟ ಸಮುದಾಯದ ಶಾಸಕರು ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ. ಇದು ದುಃಖದ ಸಂಗತಿ ಎಂದು ಹೇಳಿದರು.

ಯುಪಿಎ ಸರ್ಕಾರ ರೈತರ ಪರವಾಗಿತ್ತು. ಅದು ರೈತರ ₹ 78,000 ಕೋಟಿ ಸಾಲ ಮನ್ನಾ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉದ್ಯಮಿಗಳ ಪರವಾಗಿದೆ. ಈ ಕಾರಣಕ್ಕಾಗಿಯೇ ಅದು ಕಾರ್ಪೋರೇಟ್ ವಲಯದ ₹ 2 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಈಗ ವಿಜಯಾ ಬ್ಯಾಂಕ್‌ನಂತಹ ಜನಸಾಮಾನ್ಯರ ಬ್ಯಾಂಕ್‌ ಅಸ್ತಿತ್ವವನ್ನೇ ನಾಶಮಾಡುವ ಮೂಲಕ ಮತ್ತೊಂದು ಬರೆ ಎಳೆಯಲು ಹೊರಟಿದೆ ಎಂದು ರೈ ವಾಗ್ದಾಳಿ ನಡೆಸಿದರು.

1980ರ ದಶದಲ್ಲಿ ನ್ಯೂ ಬ್ಯಾಂಕ್‌ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಜೊತೆ ವಿಲೀನವಾಗಿತ್ತು. ಇಂದಿಗೂ ಅದರ ದುಷ್ಪರಿಣಾಮಗಳನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ವಿವಿಧ ಸ್ಟೇಟ್‌ ಬ್ಯಾಂಕ್‌ಗಳನ್ನು ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ಜೊತೆ ವಿಲೀನಗೊಳಿಸಿದ ನಂತರವೂ ಅನೇಕ ಕೆಟ್ಟ ಪರಿಣಾಮಗಳಾಗಿವೆ. ಇವೆಲ್ಲವೂ ಕಣ್ಣೆದುರಿನಲ್ಲಿ ಇರುವಾಗ ವಿಜಯಾ ಬ್ಯಾಂಕ್‌ ವಿಲೀನಕ್ಕೆ ಸಮ್ಮತಿ ನೀಡುವುದು ಸರಿಯಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.