ADVERTISEMENT

ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ: ಹರೀಶ್‌ಕುಮಾರ್ ಎಚ್ಚರಿಕೆ

ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 11:14 IST
Last Updated 29 ಸೆಪ್ಟೆಂಬರ್ 2021, 11:14 IST
ಹರೀಶ್‌ಕುಮಾರ್‌
ಹರೀಶ್‌ಕುಮಾರ್‌   

ಮಂಗಳೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸುರತ್ಕಲ್‌ ಟೋಲ್‌ಗೇಟ್‌ ಬಳಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅವರನ್ನು ಪುನಃ ಬಂಧಿಸದಿದ್ದರೆ ಸೆ.30ರಂದು ಸುರತ್ಕಲ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಎಚ್ಚರಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸರ ಎದುರೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಅವರನ್ನು ಜೈಲಿಗೆ ಕಳುಹಿಸಬೇಕಾಗಿತ್ತು. ಆದರೆ, ಪೊಲೀಸರು ದುರ್ಬಲ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿ, ತಕ್ಷಣ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಇದೇ ರೀತಿಯ ಪ್ರಕರಣಗಳು ನಡೆದಾಗ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿತ್ತು. ಪ್ರಸ್ತುತ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಇದೇ ಸಾಕ್ಷಿಯಾಗಿದೆ’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಹೊಸ ಶಿಕ್ಷಣ ನೀತಿ ಬಗ್ಗೆ ರಚಿಸಿರುವ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯಲ್ಲಿ ಆರ್‌ಎಸ್‌ಎಸ್‌ ಪ್ರಚಾರಕ ಎಂ.ಕೆ.ಶ್ರೀಧರ್, ಭ್ರಷ್ಟಾಚಾರದ ಆರೋಪದಲ್ಲಿ ವಜಾಗೊಂಡಿರುವ ವ್ಯಕ್ತಿ ರಾಜೇಂದ್ರ ಪ್ರತಾಪ್ ಗುಪ್ತ ಮೊದಲಾದವರು ಇದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸಾರ್ವಜನಿಕ ಚರ್ಚೆ ನಡೆದಿಲ್ಲ. ಆದರೆ, ಸಂಘ ಪರಿವಾರದ ಅಂಗ ಸಂಸ್ಥೆಗಳಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಇದನ್ನು ಗಮನಿಸಿದಾಗ ಆರ್‌ಎಸ್‌ಎಸ್ ಸರ್ಕಾರ ನಡೆಸುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪುನರ್ ಪರಿಶೀಲನೆ ನಡೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಾರ್ಮಿಕ ಇಲಾಖೆಯ ಕಿಟ್‌ ವಿತರಣೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಆಹಾರ ಸಾಮಗ್ರಿಗಳನ್ನು ಖರೀದಿಸಿರುವ ದಾಖಲೆ ತೋರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯ ಬೇಕುಎಂದು ಆಗ್ರಹಿಸಿದರು.

ಕಾಂಗ್ರೆಸ್ ಪ್ರಮುಖರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ನೀರಜ್ ಪಾಲ್, ಟಿ.ಕೆ.ಸುಧೀರ್, ಗಣೇಶ್ ಪೂಜಾರಿ,ಆರಿಫ್ ಬಾವ ಇದ್ದರು.

‘ಎತ್ತಿನಹೊಳೆ: ನಿಲುವು ಪ್ರಕಟಿಸಲಿ’

‘ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ನೇರವಾಗಿ ಮಾತನಾಡುತ್ತಿದ್ದಾರೆ. ಅದನ್ನು ಎದುರಿಸಲಾಗದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ನಳಿನ್‌ಕುಮಾರ್ ಮೊದಲು ಎತ್ತಿನಹೊಳೆ ಯೋಜನೆ ಬಗ್ಗೆ ತಮ್ಮ ನಿಲುವು ಪ್ರಕಟಿಸಲಿ’ ಎಂದು ಹರೀಶ್‌ಕುಮಾರ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.