ADVERTISEMENT

ಬಿಜಪಿಯವರದು ಒಳಗೊಂದು ಹೊರಗೊಂದು ನೀತಿ: ಹೆಗಡೆ ಹೇಳಿಕೆಗೆ ಐವನ್‌ ಡಿಸೋಜ ಖಂಡನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 5:49 IST
Last Updated 13 ಮಾರ್ಚ್ 2024, 5:49 IST
ಸುದ್ದಿಗೋಷ್ಠಿಯಲ್ಲಿ ಐವನ್‌ ಡಿಸೋಜ ಮಾತನಾಡಿದರು. ಪ್ರಕಾಶ್‌ ಸಾಲ್ಯಾನ್‌, ಸಬಿತಾ ಮಿಸ್ಕಿತ್‌, ಮನೋರಾಜ್‌, ಪಿ.ವಿ.ಮೋಹನ್‌, ಮೀನಾ ಟೆಲ್ಲಿಸ್ ಮತ್ತಿತರರು ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಐವನ್‌ ಡಿಸೋಜ ಮಾತನಾಡಿದರು. ಪ್ರಕಾಶ್‌ ಸಾಲ್ಯಾನ್‌, ಸಬಿತಾ ಮಿಸ್ಕಿತ್‌, ಮನೋರಾಜ್‌, ಪಿ.ವಿ.ಮೋಹನ್‌, ಮೀನಾ ಟೆಲ್ಲಿಸ್ ಮತ್ತಿತರರು ಭಾಗವಹಿಸಿದ್ದರು   

ಮಂಗಳೂರು: ‘ಸಂವಿಧಾನ ತಿದ್ದುಪಡಿ ಸಂಬಂಧ ಅನಂತ ಕುಮಾರ ಹೆಗಡೆ ಮತ್ತೆ ಹೇಳಿಕೆ ನೀಡಿದ್ದಾರೆ. ಒಂದೆಡೆ ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಒಪ್ಪಿಕೊಳ್ಳುತ್ತೇವೆ ಎನ್ನುವ ಬಿಜೆಪಿಯವರು ಇನ್ನೊಂದೆಡೆ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಒಳಗೊಂದು ಹೊರಗೊಂದು ನೀತಿಯನ್ನು ಅನುಸರಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿಸೋಜ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಹೆಗಡೆ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಅದು ಅವರ ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ. ಕೇಂದ್ರದಲ್ಲಿ ಮಾಜಿ ಸಚಿವ ಆಗಿದ್ದ ವ್ಯಕ್ತಿಯ ಹೇಳಿಕೆ ಖಂಡಿತಾ ಅವರ ಪಕ್ಷದ ನಿಲುವೇ ಆಗಿರುತ್ತದೆ. ಸಂವಿಧಾನವನ್ನು ತಿದ್ದುಪಡಿ ಮಾಡುವುದೇ ಆದರೆ, ಬಹಿರಂಗವಾಗಿ ಅದನ್ನು ಒಪ್ಪಿಕೊಳ್ಳಿ ಮತ್ತು ಸಂವಿಧಾನದ ಯಾವಭಾಗವನ್ನು ತಿದ್ದುಪಡಿ ಮಾಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ. ಜನರ ದಾರಿ ತಪ್ಪಿಸುವ ಕೆಲಸ ಮಾಡದಿರಿ’ ಎಂದರು.

‘ಒಂದು ವೇಳೆ ಹೆಗಡೆ ಹೇಳಿಕೆ ಒಪ್ಪುವುದಿಲ್ಲವಾದರೆ ತಕ್ಷಣ ಅವರನ್ನು ಪಕ್ಷದಿಂದ ಅಮಾನತು ಮಾಡಿ.‌ ಇದು ಚಿಕ್ಕ ವಿಚಾರವಲ್ಲ, ಘೋರ ಅಪರಾಧ. ಖಿನ್ನತೆಗೆ ಒಳಗಾಗಿರುವ ಅವರಿಗೆ ಒಳ್ಳೆಯ ವೈದ್ಯರಿಂದ ಚಿಕಿತ್ಸೆ ಕೊಡಿಸಿ’ ಎಂದರು.

ADVERTISEMENT

‘ಬಿಜೆಪಿಯವರಿಗೆ ಸಂವಿಧಾನ ಬಗ್ಗೆ ಗೌರವವೇ ಇಲ್ಲ. ದೇಶದ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯಲ್ಲಿದ್ದ ಜಾತ್ಯತೀತ ಪದವನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದರು. ಜಂತರ್ ಮಂತರ್‌ ಬಳಿ ಸಂವಿಧಾನ‌ದ ಪ್ರತಿಗೆ ಬೆಂಕಿ ಹಚ್ಚಿದ್ದರು. ಬೇರೆಯೇ ಸಂವಿಧಾನ ಜಾರಿಗೆ ತರುವ ಕಾರ್ಯಸೂಚಿ ಬಿಜೆಪಿಯದ್ದು. ಆದರೆ ಅದಕ್ಕೆ ಜನ ಒಪ್ಪುವುದಿಲ್ಲ’ ಎಂದರು.

‘ಪೌರತ್ವ ತಿದ್ದುಪಡಿ ಮಸೂದೆಯು 2019ರಲ್ಲೇ ಸಂಸತ್ತಿನಲ್ಲಿ ಅನುಮೋದನೆಗೊಂಡಿತ್ತು. ಅದನ್ನು ದೇಶದ ಜನ ತಿರಸ್ಕಾರ ಮಾಡಿದ್ದಾರೆ. ಹಾಗಾಗಿ ಅದರ ಅನುಷ್ಠಾನ ಕಷ್ಟ ಎಂಬುದು ಬಿಜೆಪಿಗೆ ಗೊತ್ತಿದೆ. ಸರ್ಕಾರದ ಜನ ವಿರೋಧಿ ನೀತಿ, ಹಗರಣಗಳು, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಮುಚ್ಚಿಹಾಕಲು ಈಗ ಸಿಎಎ ಜಾರಿಗೊಳಿಸಿದ್ದಾರೆ’ ಎಂದರು   

‘ಚುನಾವಣೆ ಸಮೀಪಿಸಿದಾಗ ಬಿಜೆಪಿಯ ಕಾರ್ಯಕರ್ತರೇ ಅವರ ಸಂಸದರ ವಿರುದ್ಧ ‘ಗೋಬ್ಯಾಕ್‌’ ಚಳವಳಿ ನಡೆಸುತ್ತಿದ್ದಾರೆ. ನಳಿನ್‌ ಕುಮಾರ್ ಕಟೀಲ್‌, ಶೋಭಾ ಕರಂದ್ಲಾಜೆ, ಅನಂತ ಕುಮಾರ್ ಹೆಗಡೆಯವರಂತಹ ಸಂಸದರು  ಎಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಎಂಬುದು ಇದರಲ್ಲೇ ತಿಳಿಯುತ್ತದೆ’ ಎಂದರು.  

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ  ಪಿ.ವಿ.ಮೋಹನ್, ಕಾನೂನು ಘಟಕದ ಮುಖ್ಯಸ್ಥ ಮನೋರಾಜ್, ಭರತ್ ಮುಂಡೋಡಿ, ಭಾಸ್ಕರ್, ಮೀನಾ ಟೆಲ್ಲಿಸ್, ಇಮ್ರಾನ್, ಜೇಮ್ಸ್, ಸಬಿತಾ ಮಿಸ್ಕಿತ್, ಪ್ರಕಾಶ್ ಸಾಲ್ಯಾನ್, ಹೊನ್ನಯ್ಯ, ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.