ADVERTISEMENT

ಸಹಕಾರ ಸಪ್ತಾಹ: ಒಗ್ಗಟ್ಟಿನ ಸಂದೇಶ

ಸಾಧಕ ಸಹಕಾರಿ ಸಂಘಗಳಿಗೆ ಸನ್ಮಾನ, ಗಮನ ಸೆಳೆದ ಮಳಿಗೆಗಳು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:21 IST
Last Updated 17 ನವೆಂಬರ್ 2024, 8:21 IST
<div class="paragraphs"><p>ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರಿ ಸಂಘಗಳಿಗೆ ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು‌</p></div>

ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರಿ ಸಂಘಗಳಿಗೆ ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು‌

   

ಪ್ರಜಾವಾಣಿ ಚಿತ್ರ

ಮಂಗಳೂರು: ಸಹಕಾರ ತತ್ವ ಸಾರುವ ಸಂದೇಶಗಳು, ಸಹಕಾರದಲ್ಲಿ ಸ್ತ್ರೀ ಶಕ್ತಿ ಸಾಮರ್ಥ್ಯ ಪ್ರದರ್ಶನ, ಶತಮಾನ ಕಂಡ ಸಹಕಾರಿ ಸಂಘಗಳಿಗೆ ಪುರಸ್ಕಾರದೊಂದಿಗೆ 71ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ರಾಜ್ಯ ಮಟ್ಟದ ಕಾರ್ಯಕ್ರಮವು ಶನಿವಾರ ಇಲ್ಲಿ ಸಂಭ್ರಮದಿಂದ ಜರುಗಿತು. ಸಹಕಾರ ವೃಕ್ಷದ ಅಡಿಯಲ್ಲಿ ಧುರೀಣರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಪಕ್ಷಭೇದ ಮರೆತು ಕೈ ಕುಲುಕಿದರು.

ADVERTISEMENT

ಸಹಕಾರ ಸಚಿವ ಕೆ.ಎನ್. ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದ ಸಹಕಾರ ಆಂದೋಲನಕ್ಕೆ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಪಂಚವಾರ್ಷಿಕ ಯೋಜನೆಗಳ ಮೂಲಕ ಜವಾಹರಲಾಲ್ ನೆಹರೂ ಬಲ ತುಂಬಿದರು. ಇದು ಸಹಕಾರ ಕ್ಷೇತ್ರಕ್ಕೆ ದೊರೆತಿರುವ ದೊಡ್ಡ ಬಲ. ಸಹಕಾರ ಕ್ಷೇತ್ರಕ್ಕೆ ಸಚಿವಾಲಯ ಬೇಕೆಂಬ ಬಹುವರ್ಷಗಳ ಬೇಡಿಕೆ ಈಡೇರಿಸಲು ಕೇಂದ್ರ ಸಚಿವ ಅಮಿತ್ ಶಾ ಕಾರಣರಾದರು. ಸ್ವತಃ ಸಹಕಾರಿಯಾಗಿರುವ ಅವರು, ಪ್ರತ್ಯೇಕ ತಂತ್ರಾಂಶ ಪರಿಚಯಿಸುವ ಮೂಲಕ ಹಳ್ಳಿಗಾಡಿನಿಂದ ರಾಷ್ಟ್ರ ಮಟ್ಟದವರೆಗೆ ಎಲ್ಲ ಸಹಕಾರ ಸಂಸ್ಥೆಗಳು ಕಂಪ್ಯೂಟರೀಕೃತ ವ್ಯವಸ್ಥೆ ಅಡಿಯಲ್ಲಿ ಬರಲು ನೆರವಾದರು ಎಂದರು.

ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ‘ಗ್ರಾಮೀಣ ಜನರು ಸ್ವಾಭಿಮಾನದ ಬದುಕು ಕಾಣಲು ಸಹಕಾರ ಕ್ಷೇತ್ರದಿಂದ ಸಾಧ್ಯವಾಗಿದೆ. ಹಿರಿಯರ ತ್ಯಾಗ, ನಿಸ್ವಾರ್ಥ ಸೇವೆಯಿಂದ ಸಹಕಾರ ಕ್ಷೇತ್ರ ಎತ್ತರಕ್ಕೆ ಬೆಳೆದು ನಿಂತಿದೆ. ಸಮಾಜದ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿರುವ ಸಹಕಾರ ಕ್ಷೇತ್ರದಲ್ಲಿ ದುಡಿಯುವವರ ಸಮಸ್ಯೆಗೂ ಸ್ಪಂದಿಸಬೇಕಾಗಿದೆ. ಸಹಕಾರ ಸಂಘಗಳ ನೌಕರರ ಪ್ರೋತ್ಸಾಹಧನ, ಹಾಲು ಸಂಘಗಳ ಪ್ರೋತ್ಸಾಹಧನದ ಮೊತ್ತ ಹೆಚ್ಚಿಸಬೇಕು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸಮಾಜ ಬದಲಿಸುವ ಶಕ್ತಿ ಸಹಕಾರ ಕ್ಷೇತ್ರಕ್ಕಿದೆ. ಸಹಕಾರದಿಂದ ಮಹಿಳಾ ಸಶಕ್ತೀಕರಣ ಸಾಧ್ಯವಾಗಿದೆ. ಸಹಕಾರದಂತೆ ಎಲ್ಲ ಕ್ಷೇತ್ರಗಳಲ್ಲೂ ದ್ವೇಷ ಮೀರಿ, ಪ್ರೀತಿ, ವಿಶ್ವಾಸದ ಅಲೆ ಮೂಡಬೇಕು. ಸಮಾಜದಲ್ಲಿ ಪ್ರಚೋದನಾತ್ಮಕ ಕ್ರಿಯೆಗಳಿಗೆ ಸಹಕಾರ ಉತ್ತರವಾಗಬೇಕು ಎಂದರು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದಲ್ಲಿ ಸಕ್ಕರೆ ಉದ್ಯಮ ಬೆಳೆವಣಿಗೆ ಹೊಂದುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹುಮುಖ್ಯವಾಗಿದೆ ಎಂದರು.

ಸಹಕಾರ ಜಾಥಾದಲ್ಲಿ ಗಮನ ಸೆಳೆದ ಸ್ತಬ್ಧಚಿತ್ರಗಳು : ಪ್ರಜಾವಾಣಿ ಚಿತ್ರ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಮಂಗಳೂರಿನಲ್ಲಿ ಸಹಕಾರ ಸಪ್ತಾಹವನ್ನು ಹಬ್ಬದಂತೆ ಆಚರಿಸಲು ಎಂ.ಎನ್.ರಾಜೇಂದ್ರಕುಮಾರ್ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.

ಸಹಕಾರ ಶಿಕ್ಷಣ ನಿಧಿಗೆ ₹2.65 ಕೋಟಿ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು. ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ, ಉತ್ತಮ ಸ್ವ ಸಹಾಯ ಸಂಘಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಮೇಯರ್ ಮನೋಜ್ ಕುಮಾರ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ನವೀನ್, ಪ್ರಮುಖರಾದ ರಮೇಶ್ ಎಚ್‌.ಎನ್, ಜಯಕರ ಶೆಟ್ಟಿ ಇಂದ್ರಾಳಿ, ಲಾವಣ್ಯ ಕೆ.ಆರ್, ವಿನಯಕುಮಾರ್ ಸೂರಿಂಜೆ, ಎಸ್‌ಸಿಡಿಸಿಸಿ ಬ್ಯಾಂಕ್ ಸಿಇಒ ಗೋಪಾಲಕೃಷ್ಣ ಭಟ್ ಇದ್ದರು.

ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಟಿ.ಜಿ.ರಾಜರಾಮ ಭಟ್ ವಂದಿಸಿದರು.

‘ಮಹಿಳಾ ಶಕ್ತಿಯ ಬೆಂಬಲ’

ಮಹಿಳಾ ಶಕ್ತಿಯ ಅಭೂತಪೂರ್ವ ಬೆಂಬಲದಿಂದ ಸಹಕಾರ ಕ್ಷೇತ್ರ ಮುನ್ನಡೆಯುತ್ತಿದೆ. ಪ್ರತಿ ಹಳ್ಳಿಯಲ್ಲೂ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇವರೆಲ್ಲರ ಶ್ರಮದಿಂದ ಸಹಕಾರಿ ಕ್ಷೇತ್ರ ಶ್ರೀಮಂತವಾಗಿದೆ. ಫೆ.24ರಂದು ನವೋದಯ ಗ್ರಾಮ ವಿಕಾಸ ಟ್ರಸ್ಟ್‌ ಜನ್ಮ ತಳೆದ 25ನೇ ವರ್ಷದ ಕಾರ್ಯಕ್ರಮ ನಡೆಯಲಿದೆ. ಎಲ್ಲರೂ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ವಿನಂತಿಸಿದರು.

ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರಿ ಸಂಘಗಳಿಗೆ ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು‌ : ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.