ADVERTISEMENT

ದಕ್ಷಿಣ ಕನ್ನಡ: 166 ಜನರಲ್ಲಿ ಸೋಂಕು ಪತ್ತೆ

ಒಂದೇ ದಿನ 188 ಸೋಂಕಿತರು ಗುಣಮುಖ; ಏಳು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 15:27 IST
Last Updated 7 ಆಗಸ್ಟ್ 2020, 15:27 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 166 ಜನರಿಗೆ ಕೋವಿಡ್‌–19 ಸೋಂಕು ತಗುಲಿರುವುದು ಶುಕ್ರವಾರ ಲಭಿಸಿದ ಪರೀಕ್ಷಾ ವರದಿಗಳಿಂದ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ತಗುಲಿದವರ ಒಟ್ಟು ಸಂಖ್ಯೆ 6,881ಕ್ಕೇರಿದೆ.

‘ಮಂಗಳೂರು ತಾಲ್ಲೂಕಿನ 74, ಬೆಳ್ತಂಗಡಿ ತಾಲ್ಲೂಕಿನ 36, ಬಂಟ್ವಾಳ ತಾಲ್ಲೂಕಿನ 25, ಪುತ್ತೂರು ತಾಲ್ಲೂಕಿನ 13, ಸುಳ್ಯ ತಾಲ್ಲೂಕಿನ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೆ ಮಾದರಿ ನೀಡಿದ್ದ ಜಿಲ್ಲೆಯ ಹೊರಗಿನ 17 ಮಂದಿಯಲ್ಲೂ ಸೋಂಕು ದೃಢಪಟ್ಟಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಶುಕ್ರವಾರ ಸೋಂಕು ದೃಢಪಟ್ಟವರ ಪೈಕಿ 83 ಜನರಲ್ಲಿ ಶೀತ ಜ್ವರದ (ಐಎಲ್‌ಐ) ಲಕ್ಷಣಗಳಿದ್ದವು. 13 ಜನರು ಉಸಿರಾಟದ ತೀವ್ರ ತೊಂದರೆ (ಎಸ್‌ಎಆರ್‌ಐ) ಕಾರಣದಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದರು. 19 ಜನರು ಕೋವಿಡ್‌ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಉಳಿದ 51 ಜನರಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದನ್ನು ಪತ್ತೆಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಈವರೆಗೆ ಮಂಗಳೂರು ತಾಲ್ಲೂಕಿನಲ್ಲಿ 4,813 ಪ್ರಕರಣಗಳು ಪತ್ತೆಯಾಗಿವೆ. ಬಂಟ್ವಾಳ ತಾಲ್ಲೂಕಿನಲ್ಲಿ 652, ಬೆಳ್ತಂಗಡಿ 350, ಪುತ್ತೂರು 329, ಮೂಡುಬಿದಿರೆ 98, ಮೂಲ್ಕಿ 91, ಸುಳ್ಯ 83 ಮತ್ತು ಕಡಬ ತಾಲ್ಲೂಕಿನ 55 ಜನರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಪರೀಕ್ಷೆ ಮಾಡಿಸಿಕೊಂಡ ಹೊರ ಜಿಲ್ಲೆಗಳು ಮತ್ತು ಹೊರ ರಾಜ್ಯಗಳ 410 ಜನರಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ.

188 ಮಂದಿ ಗುಣಮುಖ

ವಿವಿಧ ಆಸ್ಪತ್ರೆಗಳು ಹಾಗೂ ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಾಗಿದ್ದವರು ಮತ್ತು ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದ 188 ಜನರು ಕೋವಿಡ್‌ ಸೋಂಕಿನಿಂದ ಗುಣಮುಖರಾಗಿರುವುದು ಶುಕ್ರವಾರ ದೃಢಪಟ್ಟಿದೆ. ಆಸ್ಪತ್ರೆ ಮತ್ತು ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಾಗಿದ್ದವರನ್ನು ಬಿಡುಗಡೆ ಮಾಡಿ, ಮನೆಗಳಿಗೆ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 3,304 ಜನರು ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈಗ 3,369 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಸೋಂಕಿನ ಯಾವುದೇ ಲಕ್ಷಣಗಳಿಲ್ಲದ ಅರ್ಧದದಷ್ಟು ಜನರು ತಮ್ಮ ಮನೆಗಳಲ್ಲೇ ಪ್ರತ್ಯೇಕವಾಸದಲ್ಲಿ ಇದ್ದಾರೆ. ಉಳಿದವರು ವಿವಿಧ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಮತ್ತು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏಳು ಮಂದಿ ಸಾವು:

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಪೈಕಿ ಏಳು ಮಂದಿ ಮೃತಪಟ್ಟಿರುವುದನ್ನು ಜಿಲ್ಲಾಧಿಕಾರಿ ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಾವಿನ ಸಂಖ್ಯೆ 208ಕ್ಕೆ ತಲುಪಿದೆ.

ಮಂಗಳೂರು ತಾಲ್ಲೂಕಿನ ಐವರು ಮತ್ತು ಪುತ್ತೂರು ಹಾಗೂ ಬೆಳ್ತಂಗಡಿ ತಾಲ್ಲೂಕಿನ ತಲಾ ಒಬ್ಬ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಮೃತರಲ್ಲಿ ಮಂಗಳೂರು ತಾಲ್ಲೂಕಿನ ಒಬ್ಬ ವ್ಯಕ್ತಿಯ ಹೊರತಾಗಿ ಉಳಿದವರಿಗೆ ಗಂಭೀರ ಸ್ವರೂಪದ ಅನ್ಯ ಕಾಯಿಲೆಗಳಿದ್ದವು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.